ಬೆಂಗಳೂರು: ಗೋಡೆ ಕುಸಿತ; ನಾಲ್ವರು ಮೃತ್ಯು

ಬೆಂಗಳೂರು, ಜು.21: ನಿರ್ಮಾಣ ಹಂತದ ಅಪಾರ್ಟ್‍ಮೆಂಟ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಸಾವಿಗೀಡಾಗಿರುವ ಘಟನೆ ಬೆಂಗಳೂರಿನ ಹೊರವಲಯದ ತಿರುಮಲಶೆಟ್ಟಿಹಳ್ಳಿ ಬಳಿ ನಡೆದಿದೆ.
ಮನೋಜ್‍ಕುಮಾರ್ ಸದಯ್, ರಾಮ್‍ಕುಮಾರ್ ಸದಯ್, ನಿತೀಶ್‍ಕುಮಾರ್ ಸದಯ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಸುನಿಲ್ ಮಂಡಲ್, ಶಂಭು ಮಂಡಲ್, ದಿಲೀಪ್, ದುರ್ಗೇಶ್ ವರ್ಷ ಎಂಬುವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಕಾರ್ಮಿಕರು ಅಪಾರ್ಟ್‍ಮೆಂಟ್ ಪಕ್ಕದಲ್ಲಿಯೇ ಶೆಡ್‍ಗಳಲ್ಲಿ ವಾಸವಾಗಿದ್ದರು. ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಶೆಡ್ ಮೇಲೆಯೇ ಗೋಡೆ ಕುಸಿದು ಬಿದ್ದ ಪರಿಣಾಮ ಒಟ್ಟು 8 ಕಾರ್ಮಿಕರು ಗಾಯಗೊಂಡಿದ್ದರು. ಈ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ನಾಲ್ಕು ಕಾರ್ಮಿಕರನ್ನು ಸ್ಥಳೀಯರು ರಕ್ಷಿಸಿ ವೈಟ್‍ಫೀಲ್ಡ್‍ನ ವೈದೇಹಿ ಆಸ್ಪತ್ರೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಹಾಗೂ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ಪರಿಶೀಲಿಸಿದರು. ಸಚಿವ ಎಂಟಿಬಿ ನಾಗರಾಜ್ ಸಹ ಭೇಟಿ ನೀಡಿ, ದುರಂತಕ್ಕೆ ಕಾರಣರಾದವರ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.





