ಬೆಂಗಳೂರು | ರೈಸ್ ಪುಲ್ಲಿಂಗ್ ದಂಧೆ: ಐವರು ಆರೋಪಿಗಳ ಬಂಧನ

ಬೆಂಗಳೂರು, ಜು.21: ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿ ವ್ಯವಸ್ಥಿತವಾಗಿ ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದ ಆರೋಪದಡಿ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಂಶಿ ಸಾಯಿ, ರಾಮ್ ಸಾಯಿ ನಾಯ್ಡು, ವರುಣ್, ಕೃಷ್ಣ ಹಾಗೂ ಅಶೋಕ್ ಬಂಧಿತ ಆರೋಪಿಗಳೆಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಆರೋಪಿಗಳೆಲ್ಲರೂ ಬಿಟೆಕ್, ಏರೋನಾಟಿಕ್ ಇಂಜಿನಿಯರ್ ಹಾಗೂ ಡಿಪ್ಲೋಮಾ ವ್ಯಾಸಂಗ ಮಾಡಿದ್ದು, ಉದ್ಯೋಗ ದೊರೆಯದ ಕಾರಣ ಸುಲಭವಾಗಿ ಹಣ ಸಂಪಾದನೆ ಮಾಡಲು ಅಕ್ರಮ ದಾರಿ ಹಿಡಿದಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಇತ್ತೀಚೆಗೆ ಸೋಲದೇವನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಆರೋಪಿಗಳು ಸಾರ್ವಜನಿಕರನ್ನು ಸಂಪರ್ಕಿಸಿ ತಮ್ಮ ಬಳಿ ಬೆಲೆಬಾಳುವ ರೈಸ್ ಪುಲ್ಲಿಂಗ್ ಮಾಡುವ ವಸ್ತುವಿದ್ದು, ಇದನ್ನು ಏರೋನಾಟಿಕ್ಸ್ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ರಾಕೆಟ್ ಉಡಾವಣೆಗೆ ಬಳಸಲಾಗುತ್ತದೆ. ಇದಕ್ಕೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.
ಇದೇ ರೀತಿ, ನಗರದ ಮಹಿಳೆಗೆ 35 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾದ ಆರೋಪಿಗಳು ಮುಂಗಡವಾಗಿ 5 ಲಕ್ಷ ಪಡೆದಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ ಸಿಸಿಬಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ.
ಇವರಿಂದ ರೈಸ್ ಪುಲ್ಲಿಂಗ್ ಯಂತ್ರ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.







