ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಮಸೂದ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು: ದುಷ್ಕರ್ಮಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು
►ಆಸ್ಪತ್ರೆಯ ಬಿಲ್ ವೆಚ್ಚ ಭರಿಸಲು ಜಿಲ್ಲಾಡಳಿತ ಒಪ್ಪಿಗೆ ► ಪಡೀಲ್‌ನ ಖಾಸಗಿ ಆಸ್ಪತ್ರೆ ಮುಂದೆ ಜಮಾಯಿಸಿದ್ದ ಜನತೆ

ಮಂಗಳೂರು: ಬಜರಂಗದಳ ಕಾರ್ಯಕರ್ತರಿಂದ ಮಂಗಳವಾರ ರಾತ್ರಿ ಗಂಭೀರ ಹಲ್ಲೆಗೊಳಗಾಗಿ ನಗರದ ಪಡೀಲ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳ್ಳಾರೆ ಸಮೀಪದ ಕಳಂಜ ಗ್ರಾಮದ ಮಸೂದ್ (18) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿಂತೆ ಈಗಾಗಲೆ ಬಂಧಿತರಾಗಿರುವ 8 ಮಂದಿ ದುಷ್ಕರ್ಮಿಗಳ ವಿರುದ್ಧ ಬೆಳ್ಳಾರೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಆಸ್ಪತ್ರೆ ಮುಂದೆ ಜಮಾಯಿಸಿದ್ದ ಜನತೆ: ಗಂಭೀರ ಹಲ್ಲೆಗೊಳಗಾಗಿ ನಗರದ ಪಡೀಲ್‌ನಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಸೂದ್ ಗುರುವಾರ ಮೃತಪಟ್ಟ ಸುದ್ದಿ ತಿಳಿಯುತ್ತಲೇ ಆಸ್ಪತ್ರೆಯ ಮುಂದೆ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ, ಪಿಎಫ್‌ಐ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಜಮಾಯಿಸ ತೊಡಗಿದರು. ಅಲ್ಲದೆ ಮೃತದೇಹವನ್ನು ಆಸ್ಪತ್ರೆಯಿಂದ ಹೊರ ತೆಗೆಯಬೇಕಾದರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಬೇಕು ಮತ್ತು ಗರಿಷ್ಠ ಪರಿಹಾರ ನೀಡಬೇಕು ಹಾಗೂ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರ ಪರವಾಗಿ ಆಗ್ರಹಿಸಿದರು.
ಕ್ಷುಲ್ಲಕ ಕಾರಣಕ್ಕಾಗಿ ನಡೆದ ಪ್ರಕರಣ ವಿಚಿತ್ರ ತಿರುವು ಪಡೆಯುತ್ತಿದ್ದಂತೆಯೇ ಮುಂಜಾಗರೂಕತಾ ಕ್ರಮವಾಗಿ ಆಸ್ಪತ್ರೆಯ ಆವರಣದಲ್ಲಿ ಪೊಲೀಸ್ ಇಲಾಖೆಯು ಬಂದೋಬಸ್ತ್ ಏರ್ಪಡಿಸಿತು.
ಯು.ಟಿ.ಖಾದರ್ ಭೇಟಿ: ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಅಲ್ಲದೆ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು. ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಪುರಂದರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
*ಪಡೀಲ್‌ನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿಯ ಜೊತೆ ಮಾತನಾಡಿದೆ. ಕೊಲೆಗೈದ 8 ಮಂದಿ ಆರೋಪಿಗಳು ಕೂಡ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ. ಹಾಗಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಗರಿಷ್ಠ ಪ್ರಮಾಣದ ಪರಿಹಾರಕ್ಕೆ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಡಿಸಿ ಮತ್ತು ಎಸ್ಪಿಗೆ ಸೂಚಿಸಿದೆ. ಅದರಂತೆ ಈ ಇಬ್ಬರು ಹಿರಿಯ ಅಧಿಕಾರಿಗಳು ಸ್ಪಂದಿಸಿದ್ದಾರೆ. ಅಲ್ಲದೆ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಆ ಬಳಿಕ ಮೃತದೇಹವನ್ನು ಕೊಂಡೊಯ್ಯಲು ಮನೆಮಂದಿ ಒಪ್ಪಿಗೆ ನೀಡಿದರು ಎಂದು ಯು.ಟಿ.ಖಾದರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
*ಕ್ಷುಲ್ಲಕ ವಿಚಾರಕ್ಕೆ ಯುವಕರ ಮಧ್ಯೆ ನಡೆದ ಗಲಾಟೆ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ದುಷ್ಕರ್ಮಿಗಳ ತಂಡವು ಮಸೂದ್ ಮತ್ತಾತನ ಸ್ನೇಹಿತ ಇಬ್ರಾಹೀಂ ಶಾನಿಫ್‌ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡಿದ್ದರೂ ಇಬ್ಬರು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಆದರೆ ಪ್ರಜ್ಞೆ ಕಳಕೊಂಡ ಮಸೂದ್ ಸಮೀಪದ ಮನೆಯೊಂದರ ಬಾವಿಯ ಬಳಿ ಬಿದ್ದಿದ್ದರು ಎನ್ನಲಾಗಿದೆ. ತಕ್ಷಣ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಪಡೀಲ್‌ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಸೂದ್ ಗುರುವಾರ ಕೊನೆಯುಸಿರೆಳೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರಾದ ಸುನೀಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್ ರಂಜಿತ್, ಭಾಸ್ಕರ್ ಎಂಬವರನ್ನು ಬೆಳ್ಳಾರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.