ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ; ಪುಸ್ತಕ ಬಹುಮಾನ ಪ್ರಕಟ

photo credit- kuvempubhashabharathi.karnataka.gov.in/
ಬೆಂಗಳೂರು, ಜು. 21: ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಭಾಷಾಂತರದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ವಾಂಸರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ನೀಡುವ 2022ನೆ ಸಾಲಿನ ಗೌರವ ಪ್ರಶಸ್ತಿಗೆ ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ.ಆರ್.ಯರವಿನ ತೆಲಿಮಠ ಸೇರಿದಂತೆ ಐದು ಮಂದಿ ಆಯ್ಕೆಯಾಗಿದ್ದಾರೆ.
ಗೌರವ ಪ್ರಶಸ್ತಿಯ ಮೊತ್ತವು 50 ಸಾವಿರ ರೂ.ಗಳಾಗಿರುತ್ತದೆ. ಮೈಸೂರು ವಿವಿ ಪ್ರಾಧ್ಯಾಪಕ ಡಾ.ಆರ್.ವಿ.ಎಸ್.ಸುಂದರಂ, ಅನುವಾದಕಿ ಡಾ.ವಿಜಯಾಗುತ್ತಲ, ತಮಿಳು ಮತ್ತು ಕನ್ನಡ ಭಾಷೆಗಳ ನಡುವಿನ ಭಾಷಾಂತರಕಾರರಾಗಿ ಪ್ರಸಿದ್ಧರಾದ ಡಾ.ಕೆ.ನಲ್ಲತಂಬಿ, ಅನುವಾದಕ ವಿ.ಕೃಷ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ.
ಪುಸ್ತಕ ಬಹುಮಾನ: ಪ್ರಾಧಿಕಾರ ನೀಡುವ ಪುಸ್ತಕ ಬಹುಮಾನಗಳಿಗೆ ಇಂಗ್ಲಿಷಿಗೆ ಭಾಷಾಂತರಗೊಂಡ ಪುಸ್ತಕ, ದ ಎಸೆನ್ಶಿಯಲ್ ಮಹಾಭಾರತ-ಅನುವಾದಕರು: ಅರ್ಜುನ ಭಾರದ್ವಾಜ ಮತ್ತು ಹರಿರವಿಕುಮಾರ್ (ಮೂಲ: ಎ.ಆರ್. ಕೃಷ್ಣಶಾಸ್ತ್ರಿಯವರ ‘ವಚನಭಾರತ’), ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದವಾದ ಪರ್ದಾ ಮತ್ತು ಪಾಲಿಗಮಿ-ಅನುವಾದಕರು: ದಾದಾಪೀರ್ ಜೈಮನ್(ಮೂಲ: ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ ಮತ್ತು ಪಾಲಿಗಮಿ’), ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾದ ಎರಡು ಕೃತಿಗಳಾದ ಕಳ್ಳಿಗಾಡಿನ ಇತಿಹಾಸ-ಅನುವಾದಕರು: ಮಲರ್ವಿಳಿ ಕೆ.(ಮೂಲ: ವೈರಮುತ್ತು ಅವರ ತಮಿಳು ಕಾದಂಬರಿ ‘ಕಳ್ಳಿಕ್ಕಟ್ಟು ಇತಿಹಾಸಂ’) ಮತ್ತು ಪ್ರೇಮಪತ್ರ-ಅನುವಾದಕರು: ಮೋಹನ ಕುಂಟಾರ್(ಮೂಲ: ವೈಕಂ ಮಹಮದ್ ಬಶೀರ್ ಅವರ ಮಲಯಾಳ ಕತೆಗಳು), ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ ಅನುವಾದವಾದ ಉತ್ತರಕಾಂಡಂ-ಅನುವಾದಕರು: ಡಾ.ಎಚ್.ಆರ್. ವಿಶ್ವಾಸ(ಮೂಲ: ಎಸ್.ಎಲ್.ಭೈರಪ್ಪನವರ ‘ಉತ್ತರಕಾಂಡ’ ಕಾದಂಬರಿ) ಕೃತಿಗಳು ಆಯ್ಕೆಯಾಗಿದ್ದು, ಪುಸ್ತಕ ಬಹುಮಾನದ ಮೊತ್ತ 25 ಸಾವಿರ ರೂ.ಆಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.







