ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

ಉಡುಪಿ : ತೋನ್ಸೆ ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ೨೦೨೧ನೇ ಶೈಕ್ಷಣಿಕ ಸಾಲಿನಲ್ಲಿ ಬಿ.ಕಾಂ, ಬಿ.ಎ. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ರಮೇಶ ಅಡಿಗ ಮಾತನಾಡಿ, ಶಿಕ್ಷಣವು ನಮ್ಮ ಜೀವನ ಸಂಸ್ಕಾರವನ್ನು ಬೆಳೆಸಲು ಪೂರಕವಾಗಿರಬೇಕು. ತಾವು ಶಿಕ್ಷಣ ಪಡೆದ ಸಂಸ್ಥೆಗಳ ಋಣವನ್ನು ತೀರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಮಣಿಪಾಲ ಕಾಲೇಜಿನ ಪ್ರೊಫೆಸರ್ ಡಾ.ಅಬ್ದುಲ್ ಅಜೀಜ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೇ ಪ್ರಸಕ್ತ ವಿದ್ಯಮಾನ ಗಳನ್ನು ತಿಳಿದುಕೊಳ್ಳುವುದರ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲಿಹಾತ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲೆ ಕುಲ್ಸುಮ್ ಅಬೂಬಕರ್ ರಚಿಸಿದ ಹಿಜಾಬ್ ಪುಸ್ತಕವನ್ನು ಬಿಡುಗಡೆಗೊಳಿಸ ಲಾಯಿತು. ಶಿಕ್ಷಣ ಸಂಸ್ಥೆಯ ಖಜಾಂಚಿ ಅಬ್ದುಲ್ ಕಾದರ್, ಸಾಲಿಹಾತ್ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಶಹನವಾಜ್, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಕಾಲೇಜು ಪ್ರಾಂಶುಪಾಲ ಡಾ.ಸಬೀನಾ, ದಿವ್ಯಾ ಪೈ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಲೀಫಾ ನಾಝ್ಸಾ ಸ್ವಾಗತಿಸಿದರು. ಆಲಿಯಾ ಕೌಸರ್ ಕಾರ್ಯಕ್ರಮ ನಿರೂಪಿಸಿದರು. ನೀಹಾನಾಝ ವಂದಿಸಿದರು.