ಶಿರಾಡಿ ಘಾಟ್ ರಸ್ತೆ: ಹಗಲಿನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಹಾಸನ: ರಾಷ್ಟ್ರೀಯ ಹೆದ್ದಾರಿ 75 (ರಾ.ಹೆ. 48) ರ ಬೆಂಗಳೂರು-ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೊಣಿಗಾಲ್ ವರೆಗಿನ ಭಾಗದಲ್ಲಿ ಅಧಿಕ ಪ್ರಮಾಣದ ಮಳೆ ಬಿದ್ದು ತೀವ್ರತರವಾಗಿ ಹಾಳಾಗಿದ್ದ ರಸ್ತೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಇಲ್ಲಿನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಆದರೆ, ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿದಿದೆ.
ಖಾಸಗಿ ಬಸ್ಸುಗಳು, ಕಾರುಗಳು, ಜೀಪು, ಟೆಂಪೊ, ಎಲ್‍ಸಿ.ವಿ(ಮಿನಿ ವ್ಯಾನ್), ದ್ವಿಚಕ್ರವಾಹನಗಳು ಹಾಗೂ ತುರ್ತು ವಾಹನಗಳು (ಅಂಬುಲೆನ್ಸ್ ಮತ್ತು ಅಗ್ನಿ ಶಾಮಕ) ವಾಹನಗಳು ಮಾತ್ರ ಸಂಚಾರಕ್ಕೆ ಮಾತ್ರ ಅನುಮತಿ ನೀಡಿ, ಉಳಿದ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ತಲುಪುವ ವಾಹನಗಳಿಗೆ ಸಕಲೇಶಪುರ- ಆನೆ ಮಹಲ್- ಕ್ಯಾನಹಳ್ಳಿ- ಚಿನ್ನಳ್ಳಿ- ಕಡಗರವಳ್ಳಿ-ಮಾರನಹಳ್ಳಿ ಮೂಲಕ ಮಂಗಳೂರು ತಲುಪಬಹುದಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತಲುಪುವ ವಾಹನಗಳು ಮಿತಿ 30 ಕಿ.ಮಿ ಪರ್ ಹವರ್ ನಲ್ಲಿ ವಾಹನಗಳು ಚಾಲನೆ ಮಾಡಿ ಮಾರನಹಳ್ಳಿ-ಕಾಡುಮನೆ- ಹಾರ್ಲೆ-ಕೂಡಿಗೆ- ಆನೆಮಹಲ್-ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರು ತಲುಪಬಹುದಾಗಿದೆ. ಈ ಮಾರ್ಗಗಳು ಏಕ ಮುಖ ಸಂಚಾರಕ್ಕೆ ಮಾತ್ರ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.







