ಮಸೂದ್ ಹತ್ಯೆಗೆ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಖಂಡನೆ
ಸುಳ್ಯ: ಕಳಂಜ ಗ್ರಾಮದಲ್ಲಿ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಮಸೂದ್ ಎಂಬ ಯುವಕನನ್ನು ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಯುವಕ ಮೃತಪಟ್ಟ ಘಟನೆಗೆ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ತೀವ್ರ ಖಂಡನೆಯನ್ನು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ತಕ್ಷಣವೇ ಬಂಧಿಸಿದ್ದು ಪೊಲೀಸ್ ಇಲಾಖೆಯ ಈ ಕಾರ್ಯವನ್ನು ಸಂಘಟನೆಯಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಒಕ್ಕೂಟದ ವತಿಯಿಂದ ಸಂಚಾಲಕ ಇಕ್ಬಾಲ್ ಎಲಿಮಲೆ ತಾಲೂಕು ಮಸೀದಿ ಸಮನ್ವಯ ಸಮಿತಿ ಸಂಚಾಲಕರಾದ ಹಾಜಿ ಕೆ.ಎಂ. ಮುಸ್ತಫ, ಮುಸ್ಲಿಮ್ ಒಕ್ಕೂಟದ ಸಹ ಸಂಚಾಲಕರಾದ ಕೆ.ಎಸ್. ಉಮಾರ್, ಒಕ್ಕೂಟದ ಮುಖಂಡರಾದ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಕೆ.ಬಿ. ಅಬ್ದುಲ್ ಮಜೀದ್, ಮಸೀದಿ ಸಮನ್ವಯ ಸಮಿತಿ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ ಆಗ್ರಹಿಸಿದ್ದಾರೆ.
ಅದೇ ರೀತಿ ಮೃತ ವ್ಯಕ್ತಿಯ ಕುಟುಂಬಕ್ಕೆ ಸರಕಾರ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸುವಂತೆ ಅವರು ಅಗ್ರಹಿಸಿದ್ದಾರೆ. ಮೃತಪಟ್ಟ ಯುವಕನ ಕುಟುಂಬದ ಕಾನೂನು ಹೋರಾಟಕ್ಕೆ ತಾಲೂಕು ಮುಸ್ಲಿಮು ಒಕ್ಕೂಟ ಪೂರ್ಣಪ್ರಮಾಣದ ಬೆಂಬಲವನ್ನು ಕೊಡಲಿದೆ. ಯುವಕನ ಅಗಲಿದ ಕುಟುಂಬಕ್ಕೆ ಮುಸ್ಲಿಮ್ ಒಕ್ಕೂಟ ಸಾಂತ್ವಾನ ತಿಳಿಸಿರುತ್ತದೆ. ಮುಸ್ಲಿಂ ಸಮುದಾಯ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.