ಈ.ಡಿ.ಯಿಂದ ಸೋನಿಯಾ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಖರ್ಗೆ,ಚಿದಂಬರಂ, ಅಧೀರ್ ಸಹಿತ 75ಕ್ಕೂ ಅಧಿಕ ಕೈ ಸಂಸದರ ಬಂಧನ, ಬಿಡುಗಡೆ

ಹೊಸದಿಲ್ಲಿ, ಜು.21: ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ವಿಚಾರಣೆ ನಡೆಸುವುದನ್ನು ವಿರೋಧಿಸಿ ರಾಜ್ಯಸಭಾದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸುಮಾರು 75 ಮಂದಿ ಕಾಂಗ್ರೆಸ್ ಸಂಸದರು ಹಾಗೂ ಹಲವಾರು ಕಾರ್ಯಕರ್ತರನ್ನು ದಿಲ್ಲಿ ಪೊಲೀಸರು ಗುರುವಾರ ಬಂಧಿಸಿ, ಆನಂತರ ಬಿಡುಗಡೆಗೊಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ, ಅಜಯ್ ಮಾಕೆನ್, ಮಾಣಿಕ್ಯಂ ಟಾಗೋರ್, ಕೆ.ಸಿ. ವೇಣುಗೋಪಾಲ್, ಅಧೀರ್ ರಂಜನ್ ಚೌಧುರಿ, ಶಶಿಥರೂರ್, ಸಚಿನ್ ಪೈಲಟ್, ಹರೀಶ್ ರಾವತ್, ಅಶೋಕ್ ಗೆಹ್ಲೋಟ್, ಕೆ.ಸುರೇಶ್ ಮತ್ತಿರರು ಕೂಡಾ ಬಂಧನಕ್ಕೊಳಗಾಗಿದ್ದಾರೆಂದು ಮೂಲಗಳು ತಿಳಿಸಿವೆ.ಪ್ರತಿಭಟನೆ ನಡೆಸಲು ಸಂಸತ್‌ಭವನದಿಂದ ಕಾಂಗ್ರೆಸ್ ಪಕ್ಷದ ಮುಖ್ಯ ಕಾರ್ಯಾಲಯಕ್ಕೆ ತೆರಳಿದ ಸುಮಾರು 75 ಮಂದಿ ಸಂಸತ್ ಸದಸ್ಯರನನ್ನು ಬಂಧಿಸಿದ ದಿಲ್ಲಿ ಪೊಲೀಸರು ಅವರನ್ನು ಬಸ್‌ಗಳಲ್ಲಿ ಕರೆದೊಯ್ದರೆಂದು ಮೂಲಗಳು ತಿಳಿಸಿವೆ.
ಇ.ಡಿ.ಯಿಂದ ಸೋನಿಯಾರ ವಿಚಾರಣೆಯನ್ನು ವಿರೋಧಿಸಿ ಮಹಾರಾಷ್ಟ್ರದ ನಾಗಪುರದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.





