ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್: ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಫೈನಲ್ಗೆ ಲಗ್ಗೆ

Photo:PTI
ಯೂಜೀನ್: ಅಮೆರಿಕದ ಓರೆಗಾನ್ನ ಯುಜೀನ್ನಲ್ಲಿ ನಡೆಯುತ್ತಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ 88.39 ಮೀಟರ್ಗಳ ಪ್ರಯತ್ನದೊಂದಿಗೆ ಫೈನಲ್ ಗೆ ಅರ್ಹತೆ ಪಡೆದರು. ಪುರುಷರ ಜಾವೆಲಿನ್ ಥ್ರೋ ಫೈನಲ್ಸ್ ರವಿವಾರ ಬೆಳಗ್ಗೆ ನಡೆಯಲಿದೆ.
ಟೋಕಿಯೊ ಒಲಿಂಪಿಕ್ ಚಾಂಪಿಯನ್ ಅರ್ಹತಾ ಸುತ್ತಿನಲ್ಲಿ ತನ್ನ ಮೊದಲ ಎಸೆತದಲ್ಲಿ 88.39 ಮೀ.ದೂರಕ್ಕೆ ಜಾವೆಲಿನ್ ಎಸೆದು ಫೈನಲ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದರು.
ವಿಶ್ವ ಚಾಂಪಿಯನ್ಶಿಪ್ ಫೈನಲ್ಗಾಗಿ ಜಾವೆಲಿನ್ ಎಸೆತದಲ್ಲಿ ಅರ್ಹತಾ ಮಾರ್ಕ್ 83.50 ಮೀ. ಆಗಿದೆ.
'ಎ' ಗುಂಪಿನಲ್ಲಿ ಚೋಪ್ರಾ ಅವರ ಥ್ರೋ ಅತ್ಯುತ್ತಮವಾಗಿತ್ತು. ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಮಾತ್ರ 89.91 ಮೀ.ದೂರ ಜಾವೆಲಿನ್ ಎಸೆಯುವ ಮೂಲಕ ತನ್ನ ಪ್ರಯತ್ನವನ್ನು ಉತ್ತಮಗೊಳಿಸಿದರು.
ಭಾರತದ ರೋಹಿತ್ ಯಾದವ್ 80.42 ದೂರ ಜಾವೆಲಿನ್ ಎಸೆದು ಅರ್ಹತಾ ಸುತ್ತಿನಲ್ಲಿ 10 ನೇ ಸ್ಥಾನ ಗಳಿಸಿ ಫೈನಲ್ಗೆ ಅರ್ಹತೆ ಪಡೆದರು.