ಮನೀಶ್ ಸಿಸೋಡಿಯಾ ವಿರುದ್ಧ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಆರೋಪ ಸಂಪೂರ್ಣ ಸುಳ್ಳು: ಕೇಜ್ರಿವಾಲ್

Photo:PTI
ಹೊಸದಿಲ್ಲಿ: ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಮಾಡಿರುವ ಭ್ರಷ್ಟಾಚಾರ ಹಾಗೂ ಮದ್ಯ ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಾರೆಂಬ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆರೋಪಗಳು "ಸಂಪೂರ್ಣ ಸುಳ್ಳು" ಎಂದು ಹೇಳಿದ್ದಾರೆ.
ಜನರು ಹೆಚ್ಚು ಮೆಚ್ಚಿಕೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಸಿಸೋಡಿಯಾ ತುಂಬಾ ಶ್ರಮಿಸಿದ್ದಾರೆ. ಅದಕ್ಕಾಗಿಯೇ ಕೇಂದ್ರವು ಅವರನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು.
ದಿಲ್ಲಿ ಸರಕಾರದ ವಿವಾದಾತ್ಮಕ ಹೊಸ ಅಬಕಾರಿ ನೀತಿಯ ಕುರಿತು ತನಿಖಾ ಸಂಸ್ಥೆ ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಇಂದು ಶಿಫಾರಸು ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿಯವರ ವರದಿಯನ್ನು ಉಲ್ಲೇಖಿಸಿದ ಅವರು ಅಬಕಾರಿ ಇಲಾಖೆಯ ಉಸ್ತುವಾರಿ ಸಚಿವ ಮನೀಶ್ ಸಿಸೋಡಿಯಾ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಹಾಗೂ ಮದ್ಯದ ದೊರೆಗಳಿಗೆ ಲಾಭವಾಗುವಂತೆ ಕೆಲಸ ಮಾಡಿ ಬೊಕ್ಕಸಕ್ಕೆ ಭಾರಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದರು.