ಹಿರಿಯ ನಾಟಕಕಾರ ರತ್ನಾಕರ ರಾವ್ ಕಾವೂರು ನಿಧನ

ಮಂಗಳೂರು, ಜು.22: ಹಿರಿಯ ನಾಟಕಕಾರ, ನಿರ್ದೇಶಕ, ವಜ್ರನೇತ್ರ ಪತ್ರಿಕೆಯ ಸಂಪಾದಕ, ರತ್ನಾಕರ ರಾವ್ ಕಾವೂರು (81) ಶುಕ್ರವಾರ ಬೆಳಗ್ಗೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಸಾಮಾಜಿಕ, ಪೌರಾಣಿಕ, ಆಧ್ಯಾತ್ಮಿಕ, ನವ್ಯ ಹೀಗೆ ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ವಜ್ರನೇತ್ರ ಎಂಬ ಕನ್ನಡ ಪತ್ರಿಕೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುತ್ತಿದ್ದ ಅವರು ಸುದೀರ್ಘ 60 ವರ್ಷಗಳ ಕಾಲ ಮುನ್ನಡೆಸಿದ್ದರು.
‘ನಾಟಕ ಕಲಾ ರತ್ನ’ ಬಿರುದಾಂಕಿತ ರತ್ನಾಕರ ರಾವ್ ಕಾವೂರು ‘ಅಮ್ಮಾ ಕಟೀಲಮ್ಮಾ’, ತಬುರನ ತೆಲಿಕೆ, ಹಸುರು ಹೆಣ್ಣು, ಮಹಾತ್ಮಾ, ಸಾಮ್ರಾಟ್ ಸಂಕಣ್ಣ, ಶ್ರೀ ಗುರುರಾಘವೇಂದ್ರ, ನಳದಮಯಂತಿ, ಅಮರ ನಾರಿ ಅಬ್ಬಕ್ಕ, ಕನಕನ ಕೃಷ್ಣ, ಕತ್ತಿ ಪತ್ತಿ ಕಲ್ಯಾಣಪ್ಪೆ, ಪ್ರಚಂಡ ಪರಶುರಾಮ, ಸ್ವಾಮಿ ಶರಣಂ ಐಯ್ಯಪ್ಪೆ, ರಾಷ್ಟ್ರವೀರ ರಾಣಾಪ್ರತಾಪ, ಭೂತಾಳ ಪಾಂಡ್ಯೆ, ಮಿನಿಸ್ಟರ್ ಮುಂಡಪ್ಪಣ್ಣೆ, ಯಮೆ ತೆಲಿಪುವೆ, ಅಬ್ಬರದ ಆದಿಶಕ್ತಿ, ಕಾರ್ನಿಕದ ಕೋಟಿಚೆನ್ನಯೆ, ತುಳುನಾಡ ಸಿರಿ ನಾಗಬ್ರಹ್ಮೆ, ಮಹಾವೀರ ಮಾರುತಿ, ಪೊಣ್ಣ ಮನಸ್ ಬಂಗಾರ್, ಇತ್ಯಾದಿ ಸುಮಾರು ನೂರಕ್ಕೂ ಹೆಚ್ಚು ಕನ್ನಡ ಮತ್ತು ತುಳು ನಾಟಕಗಳನ್ನು ಬರೆದಿದ್ದರು.
ಪೊಲೀಸ್ ಪತ್ನಿ, ಕೆಂಪು ಹೆಣ್ಣು ಮುಂತಾದ ಕಾದಂಬರಿಯನ್ನೂ ಬರೆದಿದ್ದರು. ‘ನ್ಯಾಯೊಗಾದ್ ಎನ್ನ ಬದ್‌ಕ್’ ಬಂಗಾರ್ ಪಟ್ಲೇರ್ ಮುಂತಾದ ಸಿನೆಮಾದಲ್ಲೂ ಬಣ್ಣ ಹಚ್ಚಿದ ಅವರಿಗೆ ಇತ್ತೀಚೆಗೆ ತುಳು ಸಾಹಿತ್ಯ ಅಕಾಡಮಿಯ ಜೀವಮಾನ ಸಾಧನೆಯ ಗೌರವ ಪ್ರಶಸ್ತಿ ಲಭಿಸಿತ್ತು.
ಪತ್ನಿ ಜಯಂತಿ ರಾವ್ ಕೆ, ಮಕ್ಕಳಾದ ಪ್ರಾಧ್ಯಾಪಿಕೆ ಡಾ.ಸುಮಂಗಲ ರಾವ್, ಪತ್ರಕರ್ತ ರಜನ್ ಕುಮಾರ್, ನ್ಯಾಯವಾದಿ ಶಶಿರಾಜ್ ಕಾವೂರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.