ಕೊಲೆ ಬೆದರಿಕೆಯ ಬಳಿಕ ಶಸ್ತ್ರಾಸ್ತ್ರ ಪರವಾನಿಗೆಗೆ ಅರ್ಜಿ ಸಲ್ಲಿಸಿದ ನಟ ಸಲ್ಮಾನ್ ಖಾನ್

photo credit- pti
ಹೊಸದಿಲ್ಲಿ: ಮೂಲಗಳ ಪ್ರಕಾರ, ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈ ಪೊಲೀಸರಿಗೆ ವೈಯಕ್ತಿಕ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು indiatoday ವರದಿ ಮಾಡಿದೆ. ಕಳೆದ ತಿಂಗಳು ಮುಂಬೈನ ಬಾಂದ್ರಾ ಬ್ಯಾಂಡ್ಸ್ಟ್ಯಾಂಡ್ ವಾಯುವಿಹಾರದಲ್ಲಿ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಉದ್ದೇಶಿಸಿ ಬೆದರಿಕೆ ಪತ್ರ ಕಂಡುಬಂದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಲ್ಮಾನ್ ಖಾನ್ ಜುಲೈ 22 ರಂದು ಶುಕ್ರವಾರ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿಯಾಗಿದ್ದು, ತನಗೆ ಮತ್ತು ತನ್ನ ತಂದೆಗೆ ಬೆದರಿಕೆ ಪತ್ರ ಬಂದ ಕುರಿತು ಉಲ್ಲೇಖಿಸಿ, ಅವರು ಶಸ್ತ್ರಾಸ್ತ್ರ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಸಲ್ಮಾನ್ ಖಾನ್ ಗೆ ಬೆದರಿಕೆ ಪತ್ರ ಬಂದಿತ್ತು. ಜೂನ್ 5 ರಂದು ಮುಂಬೈನ ಬಾಂದ್ರಾ ಬ್ಯಾಂಡ್ಸ್ಟ್ಯಾಂಡ್ ವಾಯುವಿಹಾರದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಉದ್ದೇಶಿಸಿ “ತುಮ್ಹಾರಾ ಮೂಸ್ ವಾಲಾ ಕರ್ ದೇಂಗೆ(ನಿಮ್ಮನ್ನು ಮೂಸೇವಾಲನಂತೆ ಮಾಡುತ್ತೇವೆ)” ಎಂಬ ಸಹಿ ಮಾಡದ ಪತ್ರವೊಂದು ಪತ್ತೆಯಾಗಿತ್ತು. ಪಂಜಾಬಿ ಗಾಯಕ ಸಿಧು ಮೂಸೇವಾಲಾರನ್ನು ಮೇ ತಿಂಗಳಲ್ಲಿ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪತ್ರದ ನಂತರ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು.