ಪುತ್ತೂರು; ಅಂತರ್ ರಾಜ್ಯ ಕಳವು ಆರೋಪಿಗಳ ಬಂಧನ: 2 ಬೈಕ್, ಚಿನ್ನಾಭರಣ ವಶಕ್ಕೆ

ಪುತ್ತೂರು: ಅಂತರ್ ರಾಜ್ಯ ಸರ ಕಳವು ಆರೋಪಿಗಳನ್ನು ಬಂಧಿಸಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಅವರಿಂದ ಚಿನ್ನದ ಸರ ಹಾಗೂ ಎರಡು ಬೈಕ್ ಗಳನ್ಮು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ರಾಜ್ಯದ ಬಂಬ್ರಾಣ, ಕುಂಬ್ಳೆ ಕಾಸರಗೋಡು ನಿವಾಸಿ ಫೈಝಲ್ (29), ಸೀತಾಂಗೋಳಿ ರಾಜೀವ ಗಾಂಧಿ ಕಾಲನಿ ನಿವಾಸಿ ಅಬ್ದುಲ್ ನಿಝಾರ್ (19) ಬಂಧಿತ ಆರೋಪಿಗಳು.
ಪುತ್ತೂರು ತಾಲೂಕಿನ ನಿಡ್ನಳ್ಳಿ ಗ್ರಾಮದ ಚೂರಿಪದವು ನಿವಾಸಿ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್ ನಲ್ಲಿ ಬಂದ ಆರೋಪಿಗಳು ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಯ ಬಗ್ಗೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ ಐ ಉದಯ ರವಿ.ಎಂ.ವೈ ರವರ ನೇತೃತ್ವದ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸುಲಿಗೆ ಮಾಡಿದ 50,000 ರೂ. ಮೌಲ್ಯದ ತುಂಡಾದ ಚಿನ್ನದ ಕರಿಮಣಿ ಸರ ಹಾಗೂ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಎಫ್ ಝಡ್ ಬೈಕ್ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿತರನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಈ ಹಿಂದೆ 2019ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿರವರ ಮಾಲಕತ್ವದ ಪೆಟ್ರೋಲ್ ಪಂಪ್ ಕಳ್ಳತನ ಪ್ರಕರಣ ಹಾಗೂ ವಿಟ್ಲ ಠಾಣಾ ವ್ಯಾಪ್ತಿಯ ಕಾಶಿಮಠ ಎಂಬಲ್ಲಿ ಗೂಡ್ಸ್ ಟೆಂಪೋ ಕಳ್ಳತನ ಪ್ರಕರಣ ಮತ್ತು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಹಿಳೆಯ ಸರ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೈಝಲ್ ಎಂಬಾತನ ವಿರುದ್ಧ ಮಂಗಳೂರು ನಗರದ ಉಳ್ಳಾಲ, ಮಂಜೇಶ್ವರ, ಕುಂಬ್ಳೆ, ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣವು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
