ಇದು ಶೇ. 40 ಸರ್ಕಾರ ಎಂದು ವಿಧಾನಸೌಧದ ಕಲ್ಲು-ಕಂಬಗಳೇ ಹೇಳುತ್ತಿವೆ: ಡಾ.ಜಿ.ಪರಮೇಶ್ವರ್ ವಾಗ್ದಾಳಿ

ಮೈಸೂರು, ಜು.22: ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕಾಮಗಾರಿ ಗುತ್ತಿಗೆಯಲ್ಲಿ ಶೆ.40% ಪಡೆಯುತ್ತಿದ್ದಾರೆ ಎಂದು ವಿಧಾನ ಸೌಧದ ಕಲ್ಲುಕಂಬಗಳೇ ಹೇಳುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಪಿಎಸ್‍ಐ ಹಗರಣ ಸೇರಿದಂತೆ ಪ್ರತಿಯೊಂದರಲ್ಲೂ ಸಾಕಷ್ಟು ಲೂಟಿ ಹೊಡೆಯುತ್ತಿದೆ. ಗುತ್ತಿಗೆ ಕಾಮಗಾರಿಯಲ್ಲಿ ಶೆ.40% ಹಣ ಕೇಳುತ್ತಿದ್ದಾರೆ ಎಂದು ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಪತ್ರ ಬರೆದಿದ್ದಾರೆ. ಈ ಸರ್ಕಾರ ಪಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ವಿಧಾನಸೌಧದ ಕಲ್ಲು, ಕಂಬಳನ್ನು ಕುಟ್ಟಿದರೆ ಅವೇ ಹೇಳುತ್ತವೆ ಇದು 40% ಸರ್ಕಾರ ಎಂದು ಹೇಳಿದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡೇ ಸ್ವಾಯತ್ತ ಸಂಸ್ಥೇಗಳನ್ನು ಬಳಸಿಕೊಂಡು ಅನಾವಶ್ಯಕವಾಗಿ ತನಿಖೆ ನಡೆಸುವ ಮೂಲಕ ಕಿರುಕುಳ ಕೊಡುತ್ತಿದೆ. ಇವರು ವಿರೋಧ ಪಕ್ಷಗಳು ಇರಲೇ ಬಾರದು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರದಲ್ಲಿ ಸದಾ ಇರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ವಿರುದ್ಧ ಅನಾವಶ್ಯಕವಾಗಿ ತನಿಖೆ ನಡೆಸಿದರೆ ನಮ್ಮ ಹೋರಾಟ ಸದಾ ಇದ್ದೇ ಇರುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಚಾರಣೆಗೆ ಒಳಪಡಿಸಿದಾಗಲೂ ನಾವು ವಿರೋಧಿಸಿದ್ದೇವೆ ಮತ್ತು ಪ್ರತಿಭಟಿಸಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ನಮ್ಮ ನಾಯಕ ಆದರೆ ಸೋನಿಯಾ ಗಾಂಧಿ ನಮ್ಮ ಪಕ್ಷದ ಅಧಿನಾಯಕಿ. ಹಾಗಾಗಿ ಅವರ ಜೊತೆ ಇಡೀ ಕಾಂಗ್ರೆಸ್ ಪಕ್ಷ ಇದೇ ಎಂಬುದನ್ನು ತೋರಿಸಲು ಈ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ನಮ್ಮ ಮುಂದೆ ಇಲ್ಲ, ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನಮ್ಮ ಗುರಿ. ನಂತರ ಸಿಎಲ್‍ಪಿ ಸಭೆಯಲ್ಲಿ ಶಾಸಕರು ಯಾರು ಮುಖ್ಯಮಂತ್ರಿಯಾಗಬೇಕು ಎಂಬ ತೀರ್ಮಾನ ಮಾಡುತ್ತಾರೆ. ಆಯಾ ನಾಯಕರ ಪರ ಮುಖ್ಯಮಂತ್ರಿ ಘೋಷಣೆ ಕೂಗಿದರೆ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟು ಮಂದಿ ಸಮರ್ಥರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಇದ್ದಾರೆ ಎಂದು ಅರ್ಥ ಎಂದರು.







