ಮುಕೇಶ್ ಅಂಬಾನಿ, ಕುಟುಂಬಕ್ಕೆ ಕೇಂದ್ರದ ಭದ್ರತೆಯ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಆದೇಶ

Photo:PTI
ಹೊಸದಿಲ್ಲಿ,ಜು.22: ಮುಂಬೈನಲ್ಲಿ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸರಕಾರವು ಒದಗಿಸಿರುವ ಭದ್ರತೆಯನ್ನು ಮುಂದುವರಿಸಬಹುದು ಎಂದು ಶುಕ್ರವಾರ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯವು, ಅದನ್ನು ಪ್ರಶ್ನಿಸಿದ ಪ್ರಕರಣವನ್ನು ವಜಾಗೊಳಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಕುರಿತು ತ್ರಿಪುರಾ ಉಚ್ಚ ನ್ಯಾಯಾಲಯದ ನಿರ್ದೇಶವನ್ನು ಪ್ರಶ್ನಿಸಿ ಕೇಂದ್ರ ಸರಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಪುರಸ್ಕರಿಸಿತು.
ಮುಂಬೈನಲ್ಲಿ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಒದಗಿಸಿರುವ ಭದ್ರತೆಯನ್ನು ಪ್ರಶ್ನಿಸಿ ಬಿಕಾಶ ಸಹಾ ಎನ್ನುವವರು ಸಲ್ಲಿಸಿದ್ದ ಅರ್ಜಿಯ ಕುರಿತು ತ್ರಿಪುರಾ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ತಡೆಯಾಜ್ಞೆಯನ್ನು ನೀಡಿತ್ತು.
ಮೇ 31 ಮತ್ತು ಜೂ.21ರಂದು ಎರಡು ಮಧ್ಯಂತರ ಆದೇಶಗಳನ್ನು ಹೊರಡಿಸಿದ್ದ ತ್ರಿಪುರಾ ಉಚ್ಚ ನ್ಯಾಯಾಲಯವು, ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಲು ಆಧಾರವಾಗಿದ್ದ ಬೆದರಿಕೆ ಗ್ರಹಿಕೆ ಕುರಿತು ಗೃಹ ವ್ಯವಹಾರಗಳ ಸಚಿವಾಲಯದ ಮೂಲ ಕಡತ ಮತ್ತು ಮೌಲ್ಯಮಾಪನ ವರದಿಯನ್ನು ತನಗೆ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.







