ವಿಂಡೀಸ್ ಗೆಲುವಿಗೆ ಕಠಿಣ ಗುರಿ ನೀಡಿದ ಭಾರತ
ಮೊದಲ ಏಕದಿನ: ಧವನ್, ಗಿಲ್, ಶ್ರೇಯಸ್ ಅರ್ಧಶತಕ

3 ರನ್ನಿಂದ 18ನೇ ಶತಕದಿಂದ ವಂಚಿತರಾದ ಧವನ್ Photo: twitter
ಪೋರ್ಟ್ ಆಫ್ ಸ್ಪೇನ್, ಜು.22: ನಾಯಕ ಹಾಗೂ ಆರಂಭಿಕ ಬ್ಯಾಟರ್ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ ಕ್ರಿಕೆಟ್ ತಂಡ ವೆಸ್ಟ್ಇಂಡೀಸ್ಗೆ ಮೊದಲ ಏಕದಿನ ಪಂದ್ಯದ ಗೆಲುವಿಗೆ 309 ರನ್ ಗುರಿ ನೀಡಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ವೆಸ್ಟ್ಇಂಡೀಸ್ ನಾಯಕ ನಿಕೊಲಸ್ ಪೂರನ್ ಅವರಿಂದ ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಭಾರತವು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿದೆ.
ಇನಿಂಗ್ಸ್ ಆರಂಭಿಸಿದ ಧವನ್(97 ರನ್, 99 ಎಸೆತ, 10 ಬೌಂಡರಿ, 3 ಸಿಕ್ಸರ್)ಹಾಗೂ ಗಿಲ್(64 ರನ್, 53 ಎಸೆತ, 6 ಬೌಂಡರಿ, 2 ಸಿಕ್ಸರ್)17.4 ಓವರ್ಗಳಲ್ಲಿ 119 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ಗಿಲ್ ರನೌಟಾಗುವುದರೊಂದಿಗೆ ಈ ಜೋಡಿ ಬೇರ್ಪಟ್ಟಿತು. ಆಗ ಶ್ರೇಯಸ್ ಅಯ್ಯರ್(54 ರನ್, 57 ಎಸೆತ, 5 ಬೌಂಡರಿ, 2 ಸಿಕ್ಸರ್)ಅವರೊಂದಿಗೆ ಕೈಜೋಡಿಸಿದ ಧವನ್ 2ನೇ ವಿಕೆಟ್ಗೆ 94 ರನ್ ಸೇರಿಸಿ ತಂಡವನ್ನು ಆಧರಿಸಿದರು. ಧವನ್ ಕೇವಲ 3 ರನ್ನಿಂದ 18ನೇ ಶತಕದಿಂದ ವಂಚಿತರಾದರು.
ವಿಂಡೀಸ್ ಪರ ಗುಡಕೇಶ್ ಮೋಟಿ(2-54)ಹಾಗೂ ಜೋಸೆಫ್ (2-61) ತಲಾ ಎರಡು ವಿಕೆಟ್ ಪಡೆದರು.





