ಅಕ್ರಮ ಕಟ್ಟಡಗಳ ನಿರ್ಮಾಣ ತಡೆಗೆ ಜವಾಬ್ದಾರಿ ನಿಗದಿಪಡಿಸಿ ಮಾರ್ಗಸೂಚಿ ಬಿಡುಗಡೆ: ಹೈಕೋರ್ಟ್ ಗೆ ಮಾಹಿತಿ

ಬೆಂಗಳೂರು, ಜು.22: ಅಕ್ರಮ ಕಟ್ಟಡಗಳ ನಿರ್ಮಾಣವನ್ನು ತಡೆಯುವಲ್ಲಿ ವಿಫಲವಾಗಿರುವ ಹಿನ್ನೆಲೆ ಅಧಿಕಾರಿಗಳು ಮತ್ತು ಎಂಜಿನಿಯರ್‍ಗಳ ನಿಷ್ಕ್ರಿಯತೆಯ ಬಗ್ಗೆ ಹೈಕೋರ್ಟ್ ತೆಗೆದುಕೊಂಡಿರುವ ಗಂಭೀರ ಅಭಿಪ್ರಾಯವನ್ನು ಪರಿಗಣಿಸಿ, ಬಿಬಿಎಂಪಿ ಮುಖ್ಯ ಆಯುಕ್ತರು ಸಂಬಂಧಪಟ್ಟವರಿಗೆ ಜವಾಬ್ದಾರಿಯನ್ನು ನಿಗದಿಪಡಿಸಿ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಈ ಕುರಿತಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾ.ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅಕ್ರಮ ಕಟ್ಟಡಗಳ ನಿರ್ಮಾಣ ತಡೆಯುವ ವಿಚಾರದಲ್ಲಿ ಅಧಿಕಾರಿಗಳು ಮತ್ತು ಎಂಜಿನಿಯರ್‍ಗಳು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದರೆ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 321(ಬಿ) ಮತ್ತು ಬಿಬಿಎಂಪಿ ಕಾಯ್ದೆಯ ಸೆಕ್ಷನ್ 252ರ ಅಡಿಯಲ್ಲಿ ಅವರನ್ನು ಶಿಕ್ಷಿಸಲಾಗುವುದು ಮತ್ತು ಅವರನ್ನು ಅಮಾನತುಗೊಳಿಸಲಾಗುವುದು ಎಂದು ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಎಚ್ಚರಿಸಲಾಗಿದೆ ಎಂದು ಬಿಬಿಎಂಪಿ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಬಿಬಿಎಂಪಿ ವಲಯ ಮತ್ತು ಕಂದಾಯ ಕಚೇರಿಗಳಲ್ಲಿ ಮಂಜೂರಾದ ಯೋಜನೆಗಳ ಕುರಿತ ಮಾಹಿತಿಗಳು ಆನ್‍ಲೈನ್‍ನಲ್ಲಿ ಲಭ್ಯವಾಗಲಿವೆ ಎಂದು ಬಿಬಿಎಂಪಿ ಆಯುಕ್ತರು ಪೀಠಕ್ಕೆ ತಿಳಿಸಿದರು.





