ಗಲ್ಫ್ ಮೆಡಿಕಲ್ ವಿವಿಯಲ್ಲಿ ಉಚಿತ ಮೆಡಿಕಲ್ ಕೋರ್ಸ್ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
ತುಂಬೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಲು ಅವಕಾಶ

ಬಂಟ್ವಾಳ, ಜು.22: ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಉಚಿತ ಮೆಡಿಕಲ್, ಡೆಂಟಲ್, ಫಾರ್ಮಸಿ, ಪಿಸಿಯೋತೆರಪಿ ಕೋರ್ಸ್ ಗಳ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಶುಕ್ರವಾರ ತುಂಬೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್ ಯುಎಇ ಇದರ ಸಂಸ್ಥಾಪಕ ಡಾ. ತುಂಬೆ ಮೊಯ್ದಿನ್ ಹಾಗೂ ತುಂಬೆ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ಒಪ್ಪಂದಕ್ಕೆ ಸಹಿ ಹಾಕಿದರು.
ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ ಅರ್ಹ ಪ್ರತಿಭಾವಂತ 2 ರಿಂದ 3 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಮೆಡಿಕಲ್ ಕೋರ್ಸ್ ಗಳಿಗೆ ವಿದ್ಯಾರ್ಥಿ ವೇತನ ಯೋಜನೆಯಡಿಯಲ್ಲಿ ಉಚಿತ ಸೀಟನ್ನು ನೀಡುವ ಬಗ್ಗೆ ಈ ಒಪ್ಪಂದ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ತುಂಬೆ ಮೊಯ್ದಿನ್, 1997ರಲ್ಲಿ ನಾನು ಯುಎಇಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದಾಗ ನನ್ನ ತಂದೆ ಡಾ. ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ತುಂಬೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಮೆಡಿಕಲ್ ಸೀಟ್ ನೀಡಲು ಸಲಹೆ ನೀಡಿದ್ದರು. ಅದಕ್ಕೆ ಒಪ್ಪಿ ವಿದ್ಯಾರ್ಥಿಗಳಿಗೆ ಸೀಟು ನೀಡಿದ್ದೇನೆ. ಪ್ರಸಕ್ತ ಅವರಿಲ್ಲದ ಹಿನ್ನೆಲೆಯಲ್ಲಿ ಈ ಬಗ್ಗೆ ಒಪ್ಪಂದ ಮಾಡಿ ಅದಕ್ಕೆ ಅಧಿಕೃತ ಚಾಲನೆ ನೀಡಿದ್ದೇನೆ ಎಂದರು.
ನಾನು ಹುಟ್ಟಿದ ತುಂಬೆ ಗ್ರಾಮದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಮತ್ತು ಊರಿನ ಸರ್ವಾಂಗೀಣ ಬೆಳವಣಿಗೆಗೆ ಹಲವು ಯೋಜನೆಗಳನ್ನು ರೂಪಿಸಿ ಅದಕ್ಕೆ ಬೇಕಾದ ಸಹಾಯ ಮತ್ತು ಸಹಕಾರ ನೀಡಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿ.ಅಬ್ದುಲ್ ಸಲಾಂ ಅವರು ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಉಚಿತ ಮೆಡಿಕಲ್ ಸೀಟನ್ನು ನೀಡುತ್ತಿರುವುದು ತುಂಬಾ ಸಂತೋಷದ ವಿಷಯ. ಇದಕ್ಕಾಗಿ ನಾನು ಡಾ. ತುಂಬೆ ಮೊಯ್ದಿನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಕಾಲೇಜಿನ ವಿದ್ಯಾರ್ಥಿಗಳು ಉಚಿತ ಸೀಟಿಗೆ ಬೇಕಾದ ಅರ್ಹತೆಯನ್ನು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಟ್ರಸ್ಟಿ ಬಿ.ಎಂ.ಅಶ್ರಫ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿದರು. ಕಚೇರಿ ಅಧೀಕ್ಷಕ ಬಿ.ಅಬ್ದುಲ್ ಕಬೀರ್ ಪ್ರಸ್ತಾವನೆಗೈದರು. ಉಪನ್ಯಾಸಕಿ ನೀತಾಶ್ರೀ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ ರೈ ಬಿ., ಸಾಯಿರಾಮ್ ನಾಯಕ್ ಕಾರ್ಯಕ್ರಮದಲ್ಲಿ ಸಹಕರಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.