ಬಜ್ಪೆ; ಆತ್ಮಹತ್ಯೆ ಸ್ಥಿತಿಯಲ್ಲಿ ಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿಯ ಮೃತದೇಹ ಪತ್ತೆ

ಬಜ್ಪೆ, ಜು.22: ಇಲ್ಲಿಗೆ ಸಮೀಪದ ತಲಕಲ ಕೊಳಂಬೆಯ ಧರ್ಮಚಾವಡಿ ಮಠದ ಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿ (50) ಅವರು ಅನುಮಾನಾಸ್ಪದವಾಗಿ ಆತ್ಮಹತ್ಯೆಗೈದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸುಮಾರು ಐದು ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಪಡೆದುಕೊಂಡ ಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿ, ಪತ್ನಿಯಿಂದ ದೂರವಿದ್ದು, ಕೊಳಂಬೆಯ ತಲಕಲ ಶೆಟ್ಟಿಪಾಲ್ ಎಂಬಲ್ಲಿ ತಮ್ಮ ಮನೆಯ ಸಮೀಪ ಧರ್ಮಚಾವಡಿ ಎಂಬ ಮಠವನ್ನು ಕಟ್ಟಿಕೊಂಡು ವಾಸವಾಗಿದ್ದರು.
ಶುಕ್ರವಾರ ಬೆಳಗ್ಗೆ ಮಠದಲ್ಲಿಯೇ ತಮ್ಮ ಕಾವಿ ಲುಂಗಿಯಿಂದ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ದೇವಿಪ್ರಸಾದ್. ಇವರಿಗೆ ಮದುವೆಯಾಗಿದ್ದು ಓರ್ವ ಪುತ್ರಿಯಿದ್ದಾರೆ.
ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಸ್ವಾಮೀಜಿಯವರ ಪೂರ್ವಾಶ್ರಮದ ಪತ್ನಿ ಪ್ರಭಾ ಶೆಟ್ಟಿಯವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಮಾಡುವಂತೆ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮಸ್ಥರು ಹಾಗೂ ಪತ್ನಿ ದಾಖಲಿಸಿರುವ ದೂರುಗಳ ಪ್ರಕಾರ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







