ಪೌರಕಾರ್ಮಿಕರು, ಒಳಚರಂಡಿ ಕಾರ್ಮಿಕರ ವೇತನ ಪರಿಷ್ಕರಣೆ-ಖಾಯಂ; ಸಚಿವ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ವಿಶೇಷ ಸಭೆ

ಬೆಂಗಳೂರು, ಜು. 22: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಹಾಗೂ ಒಳಚರಂಡಿ ಕಾರ್ಮಿಕರ ವೇತನ ಪರಿಷ್ಕರಣೆ ಹಾಗೂ ಖಾಯಂಗೊಳಿಸುವ ಸಂಬಂಧ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.
ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 790 ಪೌರ ಕಾರ್ಮಿಕರು ಹಾಗೂ 232 ಒಳಚರಂಡಿ ಕಾರ್ಮಿಕರಿದ್ದು, ಅವರಿಗೆ ಕಾರ್ಮಿಕ ಇಲಾಖೆಯ ನಿಯಮಗಳ ಅನ್ವಯ ಕನಿಷ್ಠ ವೇತನ ನೀಡುವ ಬಗ್ಗೆ ಹಾಗೂ ಅವರನ್ನು ಖಾಯಂಗೊಳಿಸುವ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ನಗರದಲ್ಲಿನ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ಸಹಿತ ಇನ್ನಿತರ ಭತ್ತೆಗಳನ್ನು ನೀಡುವ ಸಂಬಂಧ ನಿಯಮಾನುಸಾರ ಸೂಕ್ತ ಕ್ರಮ ವಹಿಸಬೇಕು. ಅಲ್ಲದೆ, ನಗರಾಭಿವೃದ್ಧಿ ಇಲಾಖೆ ಎಸ್ಸಿ-ಎಸ್ಟಿ ವರ್ಗದವರಿಗೆ ಮನೆ ನಿರ್ಮಿಸಿಕೊಳ್ಳಲು ನಿಗದಿಪಡಿಸಿರುವ ಅನುದಾನ ಹೆಚ್ಚಿಸಬೇಕು. ಇ ಸ್ವತ್ತು ಸರ್ವರ್ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ್ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಸಲಹೆಗಾರ ಇ.ವೆಂಕಟಯ್ಯ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್, ಇಲಾಖೆಯ ಆಯುಕ್ತ ಡಾ.ಕೆ.ರಾಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ ಶ್ರಿಧರ್, ಪೌರಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.







