ಮೇರಿಹಿಲ್: ಸಾರ್ವಜನಿಕರ ಗಮನ ಸೆಳೆಯುವ ಉದ್ಯಾನವನ
ದ.ಕ.ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಆವರಣ

ಮಂಗಳೂರು: ನಗರ ಹೊರವಲಯದ ಮೇರಿಹಿಲ್‌ನಲ್ಲಿರುವ ದ.ಕ.ಜಿಲ್ಲಾ ಗೃಹರಕ್ಷಕ ದಳದ ಆವರಣದಲ್ಲಿ ನಿರ್ಮಿಸಲ್ಪಟ್ಟ ಸುಂದರ ಉದ್ಯಾನವನವು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕರ್ಣಾಟಕ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ಸುಮಾರು ೧ ಸಾವಿರ ಚ.ಅ. ಜಾಗದಲ್ಲಿ ೨.೨೫ ಲಕ್ಷ ರೂ. ವೆಚ್ಚದಲ್ಲಿ ಬಣ್ಣ ಬಣ್ಣದ ಹೂವುಗಳ ಹಾಗೂ ವಿವಿಧ ಹಣ್ಣುಗಳ ಗಿಡಗಳನ್ನು ನೆಡಲಾಗಿದೆ.
ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಅವರ ಕೋರಿಕೆಯ ಮೇರೆಗೆ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಸ್ಪಂದಿಸಿ ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಿಂದ ೨.೨೫ ಲಕ್ಷ ರೂ. ಮಂಜೂರು ಮಾಡಿದ್ದರು.
ಗೃಹರಕ್ಷಕ ದಳದ ಮಹಾ ಸಮಾದೇಷ್ಟ, ಡಿಜಿಪಿ ಡಾ.ಅಮರ್ ಕುಮಾರ್ ಪಾಂಡೆ ಮಾ.೩೦ರಂದು ಗೃಹರಕ್ಷಕ ದಳದ ಜಿಲ್ಲಾ ಕಚೇರಿಗೆ ಭೇಟಿ ನೀಡಿದಾಗ ಕಚೇರಿ ಆವರಣದಲ್ಲಿ ತ್ಯಾಜ್ಯ ತುಂಬಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿದ್ದರು. ಅಲ್ಲದೆ ಆವರಣವನ್ನು ತಕ್ಷಣ ಶುಚಿಗೊಳಿಸಿ, ಪರಿಸರದಲ್ಲಿ ಗಿಡಗಳನ್ನು ನೆಡುವಂತೆ ಸೂಚಿಸಿದ್ದರು. ಅದರಂತೆ ಡಾ.ಚೂಂತಾರು ಕರ್ಣಾಟಕ ಬ್ಯಾಂಕ್‌ನ ಪ್ರಾಯೋಜಕತ್ವದ ಮೂಲಕ ಉದ್ಯಾನವನ ನಿರ್ಮಾಣ ಮಾಡಿಸಿದ್ದಾರೆ.
ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲರ ಸಹಕಾರದಲ್ಲಿ ನೆಟ್ಟಿರುವ ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ.
ಹಸಿರು ಪರಿಸರಕ್ಕೆ ಒತ್ತು: ಗೃಹರಕ್ಷಕ ದಳ ೫ ವರ್ಷಗಳಿಂದ ಹಸಿರು ಪರಿಸರ ನಿರ್ಮಾಣ ಹಾಗೂ ಜಾಗೃತಿ ಮೂಡಿಸಲು ಹೆಚ್ಚಿನ ಆದ್ಯತೆ ನೀಡಿದೆ. ಜಿಲ್ಲೆಯಲ್ಲಿರುವ ಪ್ರತಿ ಗೃಹರಕ್ಷಕರು ಒಂದೊಂದು ಗಿಡ ನೆಡಲು ಸಂಕಲ್ಪಕೈಗೊಂಡಿದ್ದಾರೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಉಚಿತವಾಗಿ ಪಡೆದು ಕಳೆದ ೫ ವರ್ಷಗಳಲ್ಲಿ ೫ ಸಾವಿರಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ.
"ಗೃಹರಕ್ಷಕದಳದ ಜಿಲ್ಲಾ ಕಚೇರಿ ಆವರದಲ್ಲಿ ತ್ಯಾಜ್ಯ ತುಂಬಿಕೊಂಡಿತ್ತು. ಅದನ್ನು ತೆರವುಗೊಳಿಸಿ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಹೂವುಗಳು ಅರಳಿ ನಿಂತಾಗ ಮತ್ತಷ್ಟು ಆಕರ್ಷಣೀಯವಾಗಿ ಕಾಣಿಸಲಿದೆ. ಪ್ರಾಯೋಕತ್ವ ನೀಡಿದ ಕರ್ಣಾಟಕ ಬ್ಯಾಂಕ್‌ಗೆ ನಾವು ಅಭಾರಿಯಾಗಿದ್ದೇವೆ.
ಡಾ.ಮುರಲೀ ಮೋಹನ್ ಚೂಂತಾರು"
ಕಮಾಂಡೆಂಟ್ ಗೃಹರಕ್ಷಕ ದಳ ದ.ಕ. ಜಿಲ್ಲೆ
