ಮಡಿಕೇರಿ: ಹಾರಂಗಿ ಉದ್ಯಾನವನಕ್ಕೆ ನುಗ್ಗಿದ ಕಾಡಾನೆ; ಪ್ರವಾಸಿಗರು ದಿಕ್ಕಾಪಾಲು

ಮಡಿಕೇರಿ ಜು.23: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಹಾರಂಗಿ ಉದ್ಯಾನವನಕ್ಕೆ ಶನಿವಾರ ಸಂಜೆ ದಿಢೀರ್ ಆಗಿ ಕಾಡಾನೆಯೊಂದು ನುಗ್ಗಿದ ಪರಿಣಾಮ ಪ್ರವಾಸಿಗರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದ ಘಟನೆ ನಡೆದಿದೆ.
ಹಾರಂಗಿ ಅಣೆಕಟ್ಟೆಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆ ಅಣೆಕಟ್ಟೆ ವ್ಯಾಪ್ತಿಗೆ ಆಗಮಿಸಿ ಅಲ್ಲಿನ ಉದ್ಯಾನವನದೊಳಗೆ ಅಡ್ಡಾಡಿದೆ. ಸಂಜೆ ಸಂಗೀತ ಕಾರಂಜಿ ವೀಕ್ಷಣೆ ಆಗಮಿಸಿದ್ದ ಪ್ರವಾಸಿಗರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ.ಜಲಾಶಯದ ಭದ್ರತಾ ಪಡೆಯ ಸಿಬ್ಬಂದಿಗಳು ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಹೊರ ಕಳುಹಿಸುವಲ್ಲಿ ಯಶ್ವಿಯಾಗಿದ್ದಾರೆ.
ಹಾರಂಗಿ ಗ್ರಾಮದ ಕಿರು ಸೇತುವೆ ಬಳಿಯ ಕಾವೇರಿ ದೇವಾಲಯ ಮುಂಭಾಗ ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಗೇಟ್ ಒಂದನ್ನು ಒದ್ದು ಹೊರಕ್ಕೆ ಬಂದ ಕಾಡಾನೆ ಗ್ರಾಮದೊಳಗಿನಿಂದ ಹಾದು ಸಮೀಪದ ದೊಡ್ಡತ್ತೂರು ಅರಣ್ಯ ಪ್ರದೇಶದತ್ತ ತೆರಳಿದೆ.
ಸಂಜೆ 7 ಗಂಟೆ ವೇಳೆಗೆ ನಡೆದ ಈ ಘಟನೆಯಿಂದ ಜಲಾಶಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಈ ಕಾಡಾನೆ ಸಕಲೇಶಪುರ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಕಾರಣ ಕಳೆದ ಒಂದು ವರ್ಷದ ಹಿಂದೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಡಲಾಗಿತ್ತು ಎಂದು ತಿಳಿದುಬಂದಿದ್ದು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಡಾನೆ ಪತ್ತೆಗೆ ಕ್ರಮಕೈಗೊಂಡಿದೆ.







