ಹಾಸನ; ವಿವಿಧ ಪ್ರಕರಣಗಳಲ್ಲಿ ಒಂದೇ ಪೊಲೀಸ್ ಠಾಣಾ ವ್ಯಾಪ್ತಿಯ 68 ಜನರ ಬಂಧನ: ಎಸ್ಪಿ ಹರಿರಾಂ ಶಂಕರ್

ಹಾಸನ: 'ಸಾರ್ವಜನಿಕರ ಮನವಿ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯೊಂದರಲ್ಲಿ ಡಿವೈಎಸ್ಪಿ ಉದಯಭಾಸ್ಕರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಗಸ್ತು ತಿರುಗಿದ ವೇಳೆ ವಿವಿಧ ಅಪರಾಧದಂತಹ ಚಟುವಟಿಕೆಗಳು ಕಂಡು ಬಂದು ಸುಮಾರು 68 ಜನರನ್ನು ಬಂಧಿಸಿದಲ್ಲದೇ ಅವರ ಸಂಪೂರ್ಣ ಮಾಹಿತಿಯನ್ನು ದಾಖಲಿಸಿ ವಾಪಸ್ ಕಳುಹಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಖ ಸುಮ್ಮನೆ ರಸ್ತೆಯಲ್ಲಿ ಓಡಾಡಿಕೊಂಡು, ರಸ್ತೆ ಮಧ್ಯೆ ಹಾಗೂ ಅಲ್ಲಲ್ಲಿ ಕುಳಿತು ಮದ್ಯಪಾನ ಮಾಡುವುದು, ವೀಲಿಂಗ್, ಕುಡಿದು ವಾಹನ ಚಾಲನೆ, ಹೆಲ್ಮೆಟ್ ಹಾಕದೆ ಬೈಕ್ ಓಡಿಸುವುದು ಸೇರಿದಂತೆ, ಮಟ್ಕ, ಗ್ಯಾಂಬ್ಲಿಂಗ್ ಸೇರಿದಂತೆ ಇತರೆ ಅಪರಾಧದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಬಗ್ಗೆ ನಾನು ಹಾಸನಕ್ಕೆ ಎಸ್ಪಿಯಾಗಿ ಬಂದ ಹೊಸದರಲ್ಲೆ ಸಾರ್ವಜನಿಕರು ಬಂದು ಮಾಹಿತಿ ನೀಡಿದ್ದರು. ಈ ನಿಟ್ಟಿನಲ್ಲಿ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೆ ಪರಿಶೀಲಿಸಿದಾಗ ವಿವಿಧ ಅಪರಾಧಂತಹ ಚಟುವಟಿಕೆಗಳಲ್ಲಿ ಬಾಗಿಯಾದವರು ಕಂಡು ಬಂದು ಒಂದು ರಾತ್ರಿಯಲ್ಲೆ 68 ಜನರನ್ನು ಬಂಧಿಸಲಾಗಿ ಅವರನ್ನೆಲ್ಲಾ ಪೊಲೀಸ್ ಕ್ವಾಟ್ರಸ್ ಸಮುದಾಯಭವನದಲ್ಲಿ ಕರೆತಂದು ಎಲ್ಲರ ವಿಳಾಸ ಇತರೆ ಮಾಹಿತಿಯನ್ನು ದಾಖಲಿಸಿದಲ್ಲದೇ ಬುದ್ದಿವಾದ ಹೇಳಿ ಎಚ್ಚರಿಕೆ ಕೊಟ್ಟು ಕಳುಹಿಸಲಾಗುತ್ತಿದೆ ಎಂದರು.





