ಯಡಿಯೂರಪ್ಪನವರ ಶಾಪ ಈಶ್ವರಪ್ಪನವರಿಗೆ ತಟ್ಟುತ್ತದೆ: ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ, ಜು.23: ''ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪಗೆ ಕ್ಲಿನ್ ಚಿಟ್ ಸಿಕ್ಕಿರುವುದು ಹಾಸ್ಯಾಸ್ಪದ.ಇದು ಮೊದಲೇ ಗೊತ್ತಿದ್ದ ವಿಚಾರ. ರಾಜ್ಯ ಸರ್ಕಾರ ಯಾವುದೇ ತನಿಖೆಯನ್ನು ಪೊಲೀಸ್ ಇಲಾಖೆಗೆ ಕೊಟ್ರೆ ಸರ್ಕಾರದ ಪರವಾಗಿ ಮಾಡುತ್ತೆ'' ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಮುಖ್ಯಮಂತ್ರಿ ಪದೇ ಪದೇ ಹೇಳುತ್ತಿದ್ದರು. ಈಶ್ವರಪ್ಪನವರು ಈ ಕೇಸ್ ನಿಂದ ಪಾರಾಗುತ್ತಾರೆ ಎಂದು. ಅವರ ಆಶೀರ್ವಾದದಂತೆ ಈಶ್ವರಪ್ಪನವರು ಬಚಾವಾಗಿದ್ದಾರೆ ನಿಜ. ಆದರೆ, ಅವರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಈಶ್ವರಪ್ಪನವರಿಗೆ ಈ ಕಂಟಕ ತಪ್ಪಿದ್ದಲ್ಲ. ಅವರು ಹೈಕೋರ್ಟ್ ಮೊರೆ ಹೋಗುತ್ತಾರೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ರಾಜಕಿಯ ನಿವೃತ್ತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಅವರ ಪಕ್ಷದವರೆ ಮುಂದಿನ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ಹೊಂಡಾ ತೋಡುತ್ತಾರೆ ಎಂದ ಅವರು,ಕಣ್ಣೀರಿಡುತ್ತಲೇ ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದರು. ಬಿಎಸ್ ವೈ ಕುಟುಂಬವನ್ನ ತೆಗೆಯಲು ಕೆ.ಎಸ್ ಈಶ್ವರಪ್ಪ, ಬಿ.ಎಲ್ ಸಂತೋಷ್, ಸಿಟಿ ರವಿ. ಪ್ರಹ್ಲಾದ್ ಜೋಷಿ ಹೊರಟಿದ್ದಾರೆ. ಯಡಿಯೂರಪ್ಪನವರ ಶಾಪ ಈ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ತಟ್ಟುತ್ತೆ. ಯಡಿಯೂರಪ್ಪ ನವರಿಗೆ ಬಿಜೆಪಿ ಪಕ್ಷ ಸಾಕಷ್ಟು ತೊಂದರೆಕೊಟ್ಟಿದೆ. ಹಾಗಾಗಿ ಯಡಿಯೂರಪ್ಪನವರ ಶಾಪ ಈಶ್ವರಪ್ಪನವರಿಗೆ ತಟ್ಟಲಿದೆ ಎಂದರು.
ಇನ್ನೂ ಜಿಲ್ಲಾ ಉಸ್ತುವಾರಿ ಮಂತ್ರಿಯವರ ಭೇಟಿಯ ಬಗ್ಗೆ ಮಾತನಾಡಿದ ಬೇಳೂರು, ಈ ವರ್ಷ ಮಳೆ ಹಾನಿಗೊಳಗಾದ ಮನೆಗಳ ಮಾಲೀಕರು ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಕೂಡಲೇ ಪರಿಹಾರ ನೀಡಬೇಕು. ಒಂದು ವಾರ ಇಲ್ಲೆ ಇದ್ದು ಸಚಿವರು ಸಮಸ್ಯೆಗಳನ್ನು ಆಲಿಸಬೇಕಿತ್ತು. ಆದರೆ ಉಸ್ತುವಾರಿ ಸಚಿವರು ಹಾಗೆ ಮಾಡಿಲ್ಲ ಇದು ಸರಿಯಾದ ನಡೆಯಲ್ಲ ಎಂದರು.
'ಪೊಲೀಸ್ ಸ್ಟೇಷನ್‌ಗಳು ಬಿಜೆಪಿ ಕಚೇರಿ': ಉಳಿದಂತೆ ಮಲೆನಾಡು ಅಭಿವೃದ್ಧಿ ಮಂಡಳಿಯಲ್ಲಿ ನಡೆದ ಗಲಾಟೆ ಸಂಬಂಧ ಮಾತನಾಡಿದ ಬೇಳೂರು,ಜಿಲ್ಲೆಯ ಪೊಲೀಸ್ ಠಾಣೆಗಳು ಬಿಜೆಪಿ ಕಚೇರಿಗಳಾಗಿವೆ, ಪೊಲೀಸರು ಬಿಜೆಪಿ ಏಜೆಂಟರ್ ಗಳಾಗಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ, ವೈ.ಹೆಚ್ ನಾಗರಾಜ್,ಪಿ.ಒ. ಶಿವಕುಮಾರ್, ಸೋಮಶೇಖರ್, ವಿಜಯಲಕ್ಷ್ಮಿ ಪಾಟೀಲ್ ಮುಂತಾದವರಿದ್ದರು.







