ಜು. 26ರಿಂದ ಬೆಂಗಳೂರು–ಮಂಗಳೂರು ನಡುವೆ ವಿಶೇಷ ರೈಲು ಸಂಚಾರ ಆರಂಭ

ಸಾಂದರ್ಭಿಕ ಚಿತ್ರ
ಮಂಗಳೂರು: ಬೆಂಗಳೂರು–ಮಂಗಳೂರು ನಡುವೆ ಜು.26 ರಿಂದ ಆಗಸ್ಟ್ 30ರವರೆಗೆ ವಾರದಲ್ಲಿ ಮೂರು ದಿನ ವಿಶೇಷ ರೈಲು ಸಂಚಾರ ಆರಂಭಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಬೆಂಗಳೂರು ನಗರ ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಮೈಸೂರು ಮಾರ್ಗದಲ್ಲಿ ಈ ರೈಲು ಸಂಚರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಸಿಟಿ ಜಂಕ್ಷನ್ ನಿಲ್ದಾಣದಿಂದ ರಾತ್ರಿ 8:30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 9:05ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸಂಜೆ 6:35ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 6:15ಕ್ಕೆ ಬೆಂಗಳೂರು ನಗರ ಜಂಕ್ಷನ್ ನಿಲ್ದಾಣವನ್ನು ತಲುಪಲಿದೆ.
ಬೆಂಗಳೂರಿನಿಂದ ಪ್ರತಿ ರವಿವಾರ, ಮಂಗಳವಾರ ಹಾಗೂ ಗುರುವಾರ 06547 ಸಂಖ್ಯೆಯ ರೈಲು ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ಸಂಖ್ಯೆಯ ರೈಲು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಶಿರಾಡಿ ಘಾಟಿಯಲ್ಲಿ ವಾಹನ ಸ್ಥಗಿತಗೊಂಡಿರುವುದರಿಂದ ಇತರ ಘಾಟಿಗಳ ಮೂಲಕ ರಸ್ತೆಗಳ ಮೇಲೆ ವಾಹನಗಳ ದಟ್ಟಣೆ ಹೆಚ್ಚಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ. ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ನೀಗಿಸಲು ವಿಶೇಷ ರೈಲು ಸೇವೆ ಆರಂಭಿಸುವಂತೆ ಸಂಸದ ನಳಿನ್ ಕುಮಾರ್ ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ರಿಗೆ ಮನವಿ ಸಲ್ಲಿಸಿದ್ದರು. ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿಯೂ ಈ ಬಗ್ಗೆ ಒತ್ತಾಯಿಸಿತ್ತು.