ರಶ್ಯ ನನ್ನ ಸಾವನ್ನು ಬಯಸಿದೆ: ‘ಪನಾಮಾ ಪೇಪರ್ಸ್’ನ ಜಾನ್ ಡೋ ಆತಂಕ

ಬರ್ಲಿನ್, ಜು.24: ‘ಪನಾಮಾ ಪೇಪರ್ಸ್’ ಪ್ರಕರಣದ ಮೂಲಕ ವಿಶ್ವದಾದ್ಯಂತದ ಪ್ರಮುಖ ತೆರಿಗೆ ತಪ್ಪಿಸುವಿಕೆ ಮತ್ತು ವಂಚನೆಯನ್ನು ಬೆಳಕಿಗೆ ತಂದ , ಜಾನ್ ಡೋ ಎಂಬ ಗುಪ್ತನಾಮದಿಂದ ಗುರುತಿಸಿಕೊಂಡಿರುವ ಜಾಗೃತಿ ಕಾರ್ಯಕರ್ತ (ವ್ಹಿಸಲ್ ಬ್ಲೋವರ್), ತನಗೆ ರಶ್ಯ ಪ್ರತೀಕಾರ ಕ್ರಮ ಕೈಗೊಳ್ಳಬಹುದು ಎಂಬ ಭೀತಿಯಿದೆ ಎಂದಿದ್ದಾರೆ.
ರಶ್ಯದ ಉನ್ನತ ಅಧಿಕಾರಿಗಳು ಮತ್ತವರ ಮಿತ್ರರು ಆರ್ಥಿಕ ಅವ್ಯವಹಾರ ಎಸಗಿ ಉಕ್ರೇನ್‌ನಲ್ಲಿನ ಯುದ್ಧಕ್ಕೆ ಹಣಕಾಸಿನ ಬೆಂಬಲ ಒದಗಿಸಿರುವುದಕ್ಕೆ ತನ್ನ ಬಳಿ ಪುರಾವೆಗಳಿವೆ ಎಂದು ಜರ್ಮನಿಯ ಡೆರ್ ಸ್ಪೀಗಲ್ ಎಂಬ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜಾನ್ ಡೋ ಹೇಳಿದ್ದಾರೆ. ನಿಮಗೇನಾದರೂ ಜೀವಬೆದರಿಕೆ ಇದೆಯೇ ಎಂಬ ಪ್ರಶ್ನೆಗೆ ‘ ನನ್ನ ಸಾವನ್ನು ಬಯಸುವುದಾಗಿ ರಶ್ಯ ಸರಕಾರ ಹೇಳಿಕೆ ನೀಡಿದಂದಿನಿಂದಲೂ ಈ ಅಪಾಯದಲ್ಲಿಯೇ ಜೀವನ ಸಾಗಿಸುತ್ತಿದ್ದೇನೆ’ ಎಂದು ಉತ್ತರಿಸಿದ್ದಾರೆ. ನಿರಂಕುಶ ಆಡಳಿತದಲ್ಲಿನ ಪ್ರಬಲರು ಬಳಸುವ ತೆರಿಗೆ ಸ್ವರ್ಗದ ಕುರಿತ ಪ್ರಶ್ನೆಗೆ ಉತ್ತರಿಸಿದ ಜಾನ್ ಡೋ, ರಶ್ಯದಲ್ಲಿ ಇವರು ವಹಿಸುತ್ತಿರುವ ಪಾತ್ರವನ್ನು ಉದಾಹರಿಸಿದರು.
ಹಿಟ್ಲರ್ಗಿಂತಲೂ ರಶ್ಯ ಅಧ್ಯಕ್ಷ ಪುಟಿನ್ ಅಮೆರಿಕಕ್ಕೆ ಹೆಚ್ಚಿನ ಬೆದರಿಕೆಯಾಗಿದ್ದಾರೆ. ಪುಟಿನ್ ಬೆಂಬಲಕ್ಕೆ ಹಲವು ನಕಲಿ ಸಂಸ್ಥೆಗಳಿವೆ. ಈ ಸಂಸ್ಥೆಗಳು ಉಕ್ರೇನ್ ಯುದ್ಧಕ್ಕೆ ಆರ್ಥಿಕ ನೆರವು ಒದಗಿಸುತ್ತಿವೆ. ಈ ಹಣ ಬಳಸಿ ರಶ್ಯದ ಪಡೆಗಳು ಶಾಪಿಂಗ್ ಸೆಂಟರ್ಗಳನ್ನು ಗುರಿಯಾಗಿಸಿ ದಾಳಿ ಮಾಡಿ ಅಮಾಯಕ ಜನರನ್ನು ಹತ್ಯೆ ಮಾಡುತ್ತಿವೆ. ಅನಾಮಧೇಯ ಸಂಸ್ಥೆಗಳು ಹೊಣೆಗಾರಿಕೆ, ಉತ್ತರದಾಯಿತ್ವದಿಂದ ನುಣುಚಿಕೊಳ್ಳುವ ಮೂಲಕ ಈ ಭೀತಿಯನ್ನು ಇನ್ನಷ್ಟು ಸಂಭಾವ್ಯಗೊಳಿಸಿದೆ. ಆದರೆ ಉತ್ತರದಾಯಿತ್ವ ಇಲ್ಲದೆ ಸಮಾಜ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.
ರಶ್ಯದ ಸರಕಾರಿ ಸ್ವಾಮ್ಯದ ಟಿವಿ ಚಾನೆಲ್ ಆರ್ಟಿ ಎರಡು ಭಾಗಗಳಲ್ಲಿ ಪ್ರಸಾರ ಮಾಡಿದ ಪನಾಮಾ ಪೇಪರ್ಸ್ ಸಾಕ್ಷ್ಯಚಿತ್ರದ ಪ್ರಾರಂಭದಲ್ಲಿ ‘ಜಾನ್ ಡೋ’ ಪಾತ್ರವನ್ನು ಚಿತ್ರಹಿಂಸೆಯಿಂದ ತಲೆಗೆ ಗಾಯವಾದ ರೀತಿಯಲ್ಲಿ ತೋರಿಸಲಾಗಿದೆ. ವಿಲಕ್ಷಣ, ಜಿಗುಟಿನ ಜತೆಗೆ ಇದು ಮಾರ್ಮಿಕವಾಗಿದೆ ಎಂದು ಜೋ ಡೋ ಸಂದರ್ಶನದಲ್ಲಿ ಹೇಳಿದ್ದಾರೆ.