ಪರಿಶಿಷ್ಟರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳ : ಸಂಸತ್‌ನಲ್ಲಿ ಒಪ್ಪಿಕೊಂಡ ಕೇಂದ್ರ

ಹೊಸದಿಲ್ಲಿ, ಜು.24: 2018ರಿಂದ 2020ರವರೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಕ್ರಮವಾಗಿ.17.52 ಶೇಕಡ ಹಾಗೂ 26.71 ಶೇಕಡ ಏರಿಕೆಯಾಗಿದೆಯೆಂದು ಕೇಂದ್ರ ಸರಕಾರವು ಸಂಸತ್‌ನಲ್ಲಿ ತಿಳಿಸಿದೆ.
ಪರಿಶಿಷ್ಟರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ಕಾಂಗ್ರೆಸ್ ಸಂಸದ ಕೋಮಾಟಿ ರೆಡ್ಡಿ ವೆಂಕಟ ರೆಡ್ಡಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಸಂಸದ ಮಾನ್ನೆ ಶ್ರೀನಿವಾಸ ರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಸಹಾಯಕ ಗೃಹ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು ಈ ಅಂಕಿಅಂಶಗಳನ್ನು ಸದನದಲ್ಲಿ ಮಂಡಿಸಿದರು.
2018ರಲ್ಲಿ ಪರಿಶಿಷ್ಟ ಜಾತಿಗಳ ಮೇಲೆ 42,793 ಅಪರಾಧಗಳು ನಡೆದಿರುವ ಪ್ರಕರಣಗಳು ವರದಿಯಾಗಿದ್ದರೆ, 2019ರಲ್ಲಿ ಇಂತಹ 45,961 ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ ಪರಿಶಿಷ್ಟ ಜಾತಿಗಳವರ ಮೇಲೆ 8272 ಅಪರಾಧ ಪ್ರಕರಣಗಳು ವರದಿಯಾಗಿದೆಯೆಂದು ಸರಕಾರ ತಿಳಿಸಿದೆ.
2020ರಲ್ಲಿ ಪರಿಶಿಷ್ಚ ಜಾತಿಗಳ ಮೇಲಿನ ಅಪರಾಧ ಪ್ರಕರಣಗಳು ಉತ್ತರಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯಲ್ಲಿ (12,714)ವರದಿಯಾಗಿದೆ. ಇದೇ ಅವಧಿಯಲ್ಲಿ ಪರಿಶಿಷ್ಟ ಪಂಗಡಗಳ ಮೇಲೆ ಗರಿಷ್ಠ ಸಂಖ್ಯೆಯ ಅಪರಾಧ ಪ್ರಕರಣಗಳು ಮಧ್ಯಪ್ರದೇಶದಲ್ಲಿ (2401) ವರದಿಯಾಗಿವೆ.







