ದಿಲ್ಲಿ: ವ್ಯಕ್ತಿಯೊಬ್ಬನಿಗೆ ಮಂಕಿಪಾಕ್ಸ್ ಪತ್ತೆ

Photo:IANS
ಹೊಸದಿಲ್ಲಿ,ಜು.24: ದಿಲ್ಲಿಯಲ್ಲಿ ರವಿವಾರ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ಯಾವುದೇ ವಿದೇಶ ಪ್ರಯಾಣದ ಇತಿಹಾಸ ಹೊಂದಿರದ 31ರ ಹರೆಯದ ವ್ಯಕ್ತಿಯು ಈ ಸಾಂಕ್ರಾಮಿಕಕ್ಕೆ ತುತ್ತಾಗಿರುವುದು ದೃಢಪಟ್ಟಿದೆ. ಇದು ದೇಶದಲ್ಲಿಯ ನಾಲ್ಕನೇ ಮಂಕಿಪಾಕ್ಸ್ ಪ್ರಕರಣವಾಗಿದ್ದು,ಮೊದಲಿನ ಮೂರು ಪ್ರಕರಣಗಳು ಕೇರಳದಲ್ಲಿ ವರದಿಯಾಗಿದ್ದವು.
ಪೂರ್ವ ದಿಲ್ಲಿ ನಿವಾಸಿಯಾಗಿರುವ ಈ ವ್ಯಕ್ತಿ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದಿದ್ದ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ. ಮೂರು ದಿನಗಳ ಹಿಂದೆ ಆತನಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದ ಬಳಿಕ ಲೋಕನಾಯಕ ಜಯಪ್ರಕಾಶ (ಎಲ್ಎನ್ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಸ್ಯಾಂಪಲ್ಗಳನ್ನು ಶನಿವಾರ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ರವಾನಿಸಲಾಗಿತ್ತು.
ನಗರದಲ್ಲಿ ರೋಗವು ಪತ್ತೆಯಾಗಿರುವುದನ್ನು ದೃಢಪಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,‘ದಿಲ್ಲಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣವು ಪತ್ತೆಯಾಗಿದೆ. ರೋಗಿಯ ಆರೋಗ್ಯ ಸ್ಥಿರವಾಗಿದ್ದು,ಚೇತರಿಸಿಕೊಳ್ಳುತ್ತಿದ್ದಾನೆ. ಭಯಪಡುವ ಅಗತ್ಯವಿಲ್ಲ. ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಎಲ್ಎನ್ಜೆಪಿಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ. ರೋಗವು ಹರಡುವುದನ್ನು ತಡೆಯಲು ಮತ್ತು ದಿಲ್ಲಿ ನಿವಾಸಿಗಳನ್ನು ರಕ್ಷಿಸಲು ನಮ್ಮ ಅತ್ಯುತ್ತಮ ತಂಡವು ಪ್ರಕರಣದ ನಿಗಾ ವಹಿಸಿದೆ ’ಎಂದು ಟ್ವೀಟಿಸಿದ್ದಾರೆ.
ಜ್ವರ ಮತ್ತು ಚರ್ಮದಲ್ಲಿ ಗುಳ್ಳೆಗಳೊಡನೆ ರೋಗಿ ದಾಖಲಾಗಿದ್ದ. ಆತನನ್ನು ನಿರೀಕ್ಷಣೆಯಲ್ಲಿ ಇರಿಸಲಾಗಿತ್ತು. ಇಂದು ಆತ ಮಂಕಿಪಾಕ್ಸ್ ಗೆ ಪಾಸಿಟಿವ್ ಆಗಿರುವ ವರದಿ ಬಂದಿದೆ. ಪ್ರಮಾಣಿತ ಕಾರ್ಯವಿಧಾನದಂತೆ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಲ್ಎನ್ಜೆಪಿ ನಿರ್ದೇಶಕ ಸುರೇಶ್ ಕುಮಾರ್ ತಿಳಿಸಿದರು.
ಮುಂಬೈನಲ್ಲಿ ವಾರಕ್ಕೆ 2-3 ಶಂಕಿತ ಸ್ಯಾಂಪಲ್ಗಳು ಬರುತ್ತಿದ್ದವು,ಆದರೆ ಈ ದಿನಗಳಲ್ಲಿ ದಿನಕ್ಕೆ 2-3 ಸ್ಯಾಂಪಲ್ಗಳಿಗೆ ಹೆಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಕೇರಳಕ್ಕಾಗಿಯೇ ಎರಡು ಸೇರಿದಂತೆ ಮಂಕಿಪಾಕ್ಸ್ಗಾಗಿ 16 ಪ್ರಯೋಗಾಲಯಗಳನ್ನು ನಿಯೋಜಿಸಲಾಗಿದೆ.
ಈವರೆಗೆ ವಿಶ್ವಾದ್ಯಂತ 75 ದೇಶಗಳಲ್ಲಿ 16,000ಕ್ಕೂ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು,ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.







