ಪರ್ಕಳ ರಸ್ತೆಯಲ್ಲಿ ಲೇಹ್ ಲಡಾಕ್ ಅನುಭವ: ಡಾ.ಪಿ.ವಿ.ಭಂಡಾರಿ ಟೀಕೆ
ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಉಡುಪಿ : ಪರ್ಕಳ ರಾಷ್ಟ್ರೀಯ ಹೆದ್ದಾರಿ 169ಎ ಇದರ ಅವ್ಯವಸ್ಥೆ ಖಂಡಿಸಿ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಸ್ಥಳೀಯರು ಹಾಗೂ ಸಮಾನ ಮನಸ್ಕರು ರವಿವಾರ ಕೆಳಪರ್ಕಳದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಡಾ.ಪಿ.ವಿ.ಭಂಡಾರಿ, ಇತ್ತೀಚೆಗೆ ಆಧ್ಯಯನಕ್ಕಾಗಿ ಶಾಸಕರೆಲ್ಲ ಲೇಹ್ ಲಡಾಕ್‌ಗೆ ಹೋಗಿದ್ದಾರೆ. ನಮ್ಮ ಪರ್ಕಳಕ್ಕೆ ಬಂದರೆ ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ. ಲೇಹ್ ಲಡಾಕ್‌ನ ಅನುಭವ ಇಲ್ಲಿ ಕೂಡ ಆಗುತ್ತದೆ. ಆ ರೀತಿಯಲ್ಲಿ ಪರ್ಕಳ ರಸ್ತೆ ಅವ್ಯವಸ್ಥೆ ಆಗರವಾಗಿ ಹದಗೆಟ್ಟು ಹೋಗಿದೆ ಎಂದು ಆರೋಪಿಸಿದರು.
‘ಪ್ರಧಾನಿ ಮೋದಿಯವರೇ ದಯವಿಟ್ಟು ನಿಮ್ಮ ನಂಬರ್ ಕೊಡಿ. ನಿಮಗೆ ಫೋನ್ ಮಾಡುತ್ತೇವೆ. ಯಾಕೆಂದರೆ ಇಲ್ಲಿನ ಜನಪ್ರತಿನಿಧಿಗಳು ನಿಮ್ಮ ಹೆಸರಲ್ಲಿ ಗೆದ್ದಿದ್ದಾರೆ. ಆದರೆ ಅವರು ಜನರಿಗಾಗಿ ಏನೂ ಮಾಡುತ್ತಿಲ್ಲ. ಈಗ ಇರುವುದು ಡಬಲ್ ಎಂಜಿನ್ ಸರಕಾರ ಅಲ್ಲ, ಟ್ರಿಪಲ್ ಎಂಜಿನ್. ನಗರಸಭೆ, ವಿಧಾನಸಭೆ ಮತ್ತು ಪಾರ್ಲಿಮೆಂಟ್ ಮೂರೂ ಕಡೆ ನೀವೇ ಇದ್ದೀರಿ. ಆದರೂ ಈ ರಸ್ತೆ ದುರಸ್ತಿ ಮಾಡುತ್ತಿಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
ಚೆನ್ನಾಗಿದ್ದ ರಸ್ತೆಯನ್ನೂ ಅಗಲೀಕರಣ ಮಾಡುವುದಾಗಿ ಹೇಳಿ ಇಡೀ ರಸ್ತೆಯನ್ನು ಹಾಳು ಮಾಡಿ ನಮ್ಮ ಜೀವ ತಿನ್ನುತ್ತಿದ್ದಾರೆ. ಮಳೆ ಮುಗಿದ ಕೂಡಲೇ ರಸ್ತೆ ದುರಸ್ತಿ ಮಾಡುವುದಾಗಿ ಕೇವಲ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಲ್ಲಿ ಈಗಾಗಲೇ ಕಾಮಗಾರಿ ಮಾಡಿರುವ ರಸ್ತೆಯನ್ನು ಕೂಡ ಸರಿಯಾಗಿ ಮಾಡಿಲ್ಲ. ಸಂಪೂರ್ಣ ಅವೈಜ್ಞಾನಿಕವಾಗಿದೆ. ಶೇ.40ಕಮಿಷನ್‌ನಿಂದಲೇ ಈ ರೀತಿ ರಸ್ತೆಯಾಗಿದೆ. ರಸ್ತೆ ಹಾಳಾಗಲು ಜನಪ್ರತಿನಿಧಿಗಳು, ಅಧಿಕಾರಿ, ಗುತ್ತಿಗೆದಾರರೇ ನೇರ ಕಾರಣ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನೇತ್ರ ತಜ್ಞೆ ಡಾ.ಸುಮಲತಾ ಭಂಡಾರಿ, ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹ್ಮದ್, ಗಣೇಶ್ ರಾಜ್ ಸರಳಬೆಟ್ಟು, ರಾಘವೇಂದ್ರ ಪ್ರಭು ಕರ್ವಾಲು, ನರಸಿಂಹಮೂರ್ತಿ, ಪರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಗುರು ಪ್ರಸಾದ್, ಮಾಜಿ ನಗರಸಭೆ ಸದಸ್ಯ ಸುಕೇಶ್ ಕುಂದರ್, ಉಪೇಂದ್ರ ನಾಯಕ್, ಗಣೇಶ್ ಪೈ, ಪ್ರೊ.ಯಶೋಧಾ, ವಿನುತಾ ಕಿರಣ್, ಪ್ರಕಾಶ್ ಭಟ್, ರಸೂಲ್ ಕಟಪಾಡಿ, ಶ್ರೀರಾಮ ದಿವಾಣ, ಬಾಲಕೃಷ್ಣ ಪರ್ಕಳ, ದಿನೇಶ್ ಭಂಡಾರಿ, ಸುಧೀರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ರಸ್ತೆ ದುರಸ್ತಿಗೆ 15 ದಿನಗಳ ಗಡುವು
‘ರಸ್ತೆ ಸರಿ ಮಾಡಲು ಇನ್ನು 15 ದಿನಗಳ ಗಡುವು ಕೊಡುತ್ತೇವೆ. ಅಷ್ಟರೊಳಗೆ ರಸ್ತೆ ಸರಿಪಡಿಸದಿದ್ದರೆ ಪರ್ಕಳ ರಸ್ತೆಯಲ್ಲೇ ಒಲಿಂಪಿಕ್ಸ್ ಹಮ್ಮಿಕೊಳ್ಳಲಾಗುವುದು. ರನ್ನಿಂಗ್ ರೇಸ್, ರಸ್ತೆ ತಡೆ, ಗುಂಡಿ ಎಣಿಸುವ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ವಿನೂತನ ರೀತಿಯಲ್ಲಿ ತೀವ್ರ ಹೋರಾಟ ನಡೆಸಲಾಗು ವುದು ಎಂದು ಡಾ.ಪಿ.ವಿ.ಭಂಡಾರಿ ಎಚ್ಚರಿಕೆ ನೀಡಿದರು.
15 ದಿನಗಳ ಹಿಂದೆ ಮುಖ್ಯಮಂತ್ರಿ ಬಂದಾಗ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಎಲ್ಲ ಗುಂಡಿಗಳನ್ನು ಮುಚ್ಚಲಾಗಿತ್ತು. ಅದೇ ರೀತಿ ಮುಖ್ಯಮಂತ್ರಿ ಬೊಮ್ಮಾಯಿ ಇಲ್ಲಿಗೆ ಬಂದರೆ ಇಲ್ಲಿನ ರಸ್ತೆ ಕೂಡ ಯಾವುದೇ ಮಳೆಗಾಲ ಇದ್ದರೂ ದುರಸ್ತಿ ಆಗಬಹುದು. ನಮ್ಮ ಹೋರಾಟ ಯಾವುದೇ ರಾಜಕೀಯ ಪ್ರೇರಿತವಲ್ಲ. ಆದುದರಿಂದ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.