ಬೀಡಿ ಕಾರ್ಮಿಕರ ರಕ್ಷಣೆಗೆ ರಾಷ್ಟ್ರಮಟ್ಟದಲ್ಲಿ ಕಾನೂನು ರಚನೆಯಾಗಬೇಕು: ಮಾಜಿ ಸಿಎಂ ವೀರಪ್ಪ ಮೊಯ್ಲಿ
ಬೀಡಿ ಕಾರ್ಮಿಕರ ಸಮಾವೇಶ-‘ಬೀಡಿ ಬದುಕು’ ಅಧ್ಯಯನ ಗ್ರಂಥ ಬಿಡುಗಡೆ

ಮಂಗಳೂರು: ಬೀಡಿ ಕಾರ್ಮಿಕರ ಬದುಕು ದಾರುಣವಾಗಿದೆ. ಅವರ ಬದುಕುವ ಹಕ್ಕು, ಕಾರ್ಪಣ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಮಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಕೂಡ ಬಲವಾದ ಕಾನೂನು ರಚನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್, ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಯೂನಿಯನ್‌ನ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರವಿವಾರ ನಡೆದ ಬೀಡಿ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳಿಕ ‘ಬೀಡಿ ಬದುಕು’ ಅಧ್ಯಯನ ಗ್ರಂಥವನ್ನು ಬಿಡುಗಡೆಗೊಳಿಸಿದ ಡಾ. ಎಂ.ವೀರಪ್ಪ ಮೊಯ್ಲಿ ದ.ಕ.ಮತ್ತು ಉಡುಪಿ ಜಿಲ್ಲೆಗಳಿಗೆ ಬೀಡಿ ಉದ್ಯಮವು ದೊಡ್ಡ ಶಕ್ತಿಯನ್ನು ನೀಡಿದೆ. ಅಸಂಖ್ಯಾತ ಸಂಖ್ಯೆಯಲ್ಲಿರುವ ಬೀಡಿ ಕಾರ್ಮಿಕರ ಆದಾಯದ ಶೇ.50 ಭಾಗ ಅವರ ಕುಟುಂಬದ ಸದಸ್ಯರ ರೋಗರುಜಿನಗಳನ್ನು ತಡೆಯಲು ವ್ಯಯಿಸಬೇಕಾಗುತ್ತದೆ. ಇಲಾಖೆಯ ಕಾರ್ಮಿಕರ ನಿಧಿಯು ತುಂಬಿ ತುಳುಕಾಡುತ್ತಿದ್ದು, ಈ ನಿಧಿಯ ಶೇ.75 ಭಾಗ ಕಾರ್ಮಿಕರ ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರ ಆರೋಗ್ಯ ರಕ್ಷಣೆಗಾಗಿಯೇ ವ್ಯಯವಾಗುವಂತೆ ಸರಕಾರ ನೀತಿ ರೂಪಿಸಬೇಕು ಎಂದು ವೀರಪ್ಪ ಮೊಯ್ಲಿ ಆಗ್ರಹಿಸಿದರು.
ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿ ಬೀಡಿ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸೌಲಭ್ಯಗಳನ್ನು ಒಂದೇ ಕಡೆ ಪಡೆಯಲು ಸಾಧ್ಯವಾಗುವಂತೆ ಪ್ರತ್ಯೇಕ ನಿಗಮ ಮಾಡುವುದರಿಂದ ಹೆಚ್ಚಿನ ಅನುಕೂಲ ಸಾಧ್ಯವಾಗಬಹುದು ಎಂದು ಅಭಿಪ್ರಾಯಪಟ್ಟರು.
ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ಯತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಬೀಡಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಕೆ.ಎಸ್. ಕೋಶಾಧಿಕಾರಿ ಇಸ್ಮಾಯಿಲ್ ಡಿ.ಎಸ್, ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ಎಚ್‌ಎಂಎಸ್ ರಾಜ್ಯಾಧಕ್ಷ ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್‌ನ ಅಧ್ಯಕ್ಷ ಮುಹಮ್ಮದ್ ರಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.












