ದ.ಕ.ಜಿಲ್ಲಾ 9ನೇ ಚುಟುಕು ಸಾಹಿತ್ಯ ಸಮ್ಮೇಳನ

ಮಂಗಳೂರು : ಕೇವಲ ನಾಲ್ಕು ಸಾಲುಗಳಲ್ಲಿ ಓದಿ ಮುಗಿಸಬಹುದಾದ ಚುಟುಕುಗಳನ್ನು ಬರೆಯುವುದು ತುಂಬಾ ಕಷ್ಟದ ಕೆಲಸವಾಗಿದೆ. ಚುಟುಕು ರಚನೆಗೂ ಮುನ್ನ ಕಲ್ಪನೆ ಮತ್ತು ಪ್ರಾಸ ಬರಲು ಸಾಕಷ್ಟು ಓದುವಿನ ಅಗತ್ಯವಾಗಿದೆ. ಹಾಗಾಗಿಯೇ ನಾಲ್ಕು ಸಾಲಿನ ಚುಟುಕುಗಳಲ್ಲಿ ಅರ್ಥಗರ್ಭಿತ ವಿಚಾರಗಳನ್ನು ಹೇಳಲು ಸಾಧ್ಯವಿದೆ ಎಂದು ರಾಜ್ಯ ಅಲೆಮಾರಿ/ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ವತಿಯಿಂದ ತುಳು ಸಾಹಿತ್ಯ ಅಕಾಡಮಿಯ ಸಹಯೋಗ ಮತ್ತು ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿಯ ಸಹಕಾರದಲ್ಲಿ ರವಿವಾರ ನಗರದ ಉರ್ವಸ್ಟೋರ್‌ನ ತುಳು ಭವನದ ಯೋಧ ದಿ. ತಾರನಾಥ ಬೋಳಾರ್ ವೇದಿಕೆಯಲ್ಲಿ ನಡೆದ ದ.ಕ. ಜಿಲ್ಲಾ ೯ನೇ ಚುಟುಕು ಸಾಹಿತ್ಯ ಸಮ್ಮೇಳನ, ವೈವಿಧ್ಯ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಗಳನ್ನು ಖರೀದಿಸಿ ಓದುವುದರಿಂದ ಅದರ ಮೌಲ್ಯಗಳು ಹೆಚ್ಚುತ್ತವೆ. ಓದಿನಿಂದ ಬುದ್ಧಿಮತ್ತೆಯೂ ವೃದ್ಧಿಸುತ್ತದೆ. ಕೆಲಸದ ಒತ್ತಡದ ಮಧ್ಯೆಯೂ ಸಾಹಿತ್ಯದ ಅಭಿರುಚಿ ಬೆಳೆಸುವ ಅಗತ್ಯವಿದೆ. ಮತ್ತು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದರು.
ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಚುಟುಕು ಸಾಹಿತ್ಯ ಪರಿಷತ್‌ನ ತುಳು ಲೋಗೋ ಅನಾವರಣಗೊಳಿಸಿದರು. ಸಮ್ಮೇಳನಾಧ್ಯಕ್ಷ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದ್ದರು. ಚುಸಾಪ ಕೇಂದ್ರ ಸಮಿತಿಯ ಸಂಚಾಲಕ ಡಾ. ಎಂ.ಜಿ.ಆರ್. ಅರಸ್, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ.ಮಂಜುನಾಥ ಎಸ್.ರೇವಣಕರ್, ಉದ್ಯಮಿ ನಾರಾಯಣ ಮೂಳೂರು, ಚುಸಾಪ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಚುಸಾಪ ಮೈಸೂರು ಜಿಲ್ಲಾಧ್ಯಕ್ಷೆ ಡಾ.ರತ್ನಾ ಹಾಲಪ್ಪ, ಚುಸಾಪ ಮೈಸೂರು ತಾಲೂಕು ಅಧ್ಯಕ್ಷ ನಟರಾಜ್, ಶ್ರೀ ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಹಾಸ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ತಾಲೂಕು ಚುಸಾಪ ಅದ್ಯಕ್ಷ ಕಾ.ವಿ.ಕೃಷ್ಣದಾಸ್ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಸ್ವಾಗತಿಸಿದರು. ಸಮ್ಮೇಳನದ ಸದಸ್ಯ ಸಂಚಾಲಕ ನರೇಂದ್ರ ಕೆರೆಕಾಡು ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಚುಟುಕು ಕವಿಗೋಷ್ಠಿ, ಬಹುಭಾಷಾ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ನಡೆಯಿತು. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುದ್ರೋಳಿ ಗಣೇಶ್ ಅವರಿಂದ ಹರಿಕಥಾ ಶೈಲಿಯ ಜಾದೂ ಪ್ರದರ್ಶನ, ಜಗದೀಶ್ ಡಿ.ಕೆ. ಅವರಿಂದ ಹಾಸ್ಯ ರಂಜನೆ, ಸನಾತನ ನಾಟ್ಯಾಲಯದಿಂದ ನಾಟ್ಯಾಂಜಲಿ ಕಾರ್ಯಕ್ರಮ ಪ್ರಸ್ತುತಗೊಂಡಿತು.







