ಮಲ್ಲಿಕಾರ್ಜುನ ಖರ್ಗೆ ಮನೆಗೆ ಪರಮೇಶ್ವರ್: ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ ಭೇಟಿ

ಬೆಂಗಳೂರು, ಜು.24: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹೆಸರು ಉಲ್ಲೇಖ ಕುರಿತ ಬಿಸಿ ಬಿಸಿ ಚರ್ಚೆ ನಡುವೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಶಾಸಕ ಜಿ. ಪರಮೇಶ್ವರ್ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ರವಿವಾರ ಇಲ್ಲಿನ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದ ಜಿ.ಪರಮೇಶ್ವರ್, ಸುದೀರ್ಘ ಚರ್ಚೆ ನಡೆಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಪರಮೇಶ್ವರ್, ಖರ್ಗೆ ಅವರು ಹಿರಿಯರು. ನಮ್ಮ ತಂದೆಗೆ ಅವರ ಜೊತೆ ಒಡನಾಟ ಇತ್ತು. ಒಂದೇ ಕುಟುಂಬದವರಂತೆ ಇದ್ದೇವೆ. ಎಂಬತ್ತನೇ ವರ್ಷದ ಹುಟ್ಟುಹಬ್ಬದ ಕಾರಣ ಶುಭ ಕೋರಲು ಬಂದಿದ್ದೇನೆ ಎಂದರು.
113 ಸ್ಥಾನಗಳು ಬಂದ ನಂತರ ಮುಖ್ಯಮಂತ್ರಿ ಸ್ಥಾನ ಯೋಚನೆ ಮಾಡಬೇಕು. ಅಷ್ಟಕ್ಕೂ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ. ಪಕ್ಷಕ್ಕೆ ಬಹುಮತ ಬಂದ ಬಳಿಕ ಕೇಂದ್ರದಿಂದ ರಾಜ್ಯಕ್ಕೆ ವೀಕ್ಷಕರನ್ನು ಹೈಕಮಾಂಡ್ ಕಳುಹಿಸಲಿದೆ. ಬಳಿಕ ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಾರೆ. ಅದಾದ ಬಳಿಕ ಹೈಕಮಾಂಡ್‍ಗೆ ಮಾಹಿತಿ. ಆ ನಂತರವಷ್ಟೇ ಮುಖ್ಯಮಂತ್ರಿ ಆಯ್ಕೆ ಎಂದು ತಿಳಿಸಿದರು.
ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರು ಆ ಮಾತು ಹೇಳಲೇಬೇಕು. ನಾನು ಕೂಡ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಈ ಸಂದರ್ಭದಲ್ಲಿ ನಾನು ಅಷ್ಟು ಕಟುವಾಗಿ ಹೇಳದೇ ಇರಬಹುದು. ಆದರೂ ನನ್ನದೇ ಆದ ರೀತಿಯಲ್ಲಿ ಪಕ್ಷದ ಕೆಲಸ ಮಾಡಿ ಎನ್ನುತ್ತಿದ್ದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.
ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾನು ಮುಖ್ಯಮಂತ್ರಿ ಆಗುವುದನ್ನು ಹೈಕಮಾಂಡ್ ಕೇಳಿಕೊಂಡು ಬಂದು ಹೇಳಬೇಕಷ್ಟೇ. ಬಿಜೆಪಿ ಮೊನ್ನೆ ಹುಟ್ಟಿರುವ ಪಕ್ಷ. ನಮ್ಮ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ. ಯಾವಾಗ ಏನು ನಿರ್ಣಯ ತೆಗೆದುಕೊಳ್ಳಬೇಕೆಂಬುದು ನಮ್ಮ ಪಕ್ಷದ ಹೈಕಮಾಂಡ್‍ಗೆ ಗೊತ್ತಿದೆ. ನಮ್ಮ ಪಕ್ಷದ ಬಗ್ಗೆ ಬಿಜೆಪಿಯವರಿಗೆ ಚಿಂತೆ ಯಾಕೆ ಎಂದು ಪ್ರಶ್ನೆ ಮಾಡಿದರು.







