15ನೇ ರಾಷ್ಟ್ರಪತಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿರುವ ದ್ರೌಪದಿ ಮುರ್ಮು

ಹೊಸದಿಲ್ಲಿ, ಜು.24: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಸೋಮವಾರ ಹೊಸದಿಲ್ಲಿಯ ಸಂಸತ್‌ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಮಾಣವಚನ ಕಾರ್ಯಕ್ರಮಕ್ಕೆ ಮುನ್ನ ನೂತನ ರಾಷ್ಟ್ರಪತಿಯವರಿಗೆ 21 ಕುಶಾಲುತೋಪುಗಳ ಗೌರವರಕ್ಷೆ ನೀಡಲಾಗುವುದು. ಆನಂತರ ಸಂಸತ್‌ನ ಸೆಂಟ್ರಲ್‌ಹಾಲ್‌ನಲ್ಲಿ ಬೆಳಗ್ಗೆ 10:15ರ ವೇಳೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಮುರ್ಮು ಅವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚವನ್ನು ಬೋಧಿಸಲಿದ್ದಾರೆ.
ಆನಂತರ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಭಾಷಣವನ್ನು ಮಾಡಲಿದ್ದಾರೆ. ಸಮಾರಂಭದ ಮೊದಲು ನಿರ್ಗಮನ ರಾಷ್ಟ್ರಪತಿ ರಾಮನಾಥ್ ಕೋವಿದ್ ಹಾಗೂ ನಿಯೋಜಿತ ರಾಷ್ಟ್ರಪತಿ ಮುರ್ಮು ಅವರನ್ನು ವಿಧ್ಯುಕ್ತವಾದ ಮೆರವಣಿಗೆಯೊಂದಿಗೆ ಸಂಸತ್‌ಭವನಕ್ಕೆ ಆಗಮಿಸಲಿದ್ದಾರೆ.
ಉಪರಾಷ್ಚ್ರಪತಿ ಹಾಗೂ ರಾಜ್ಯಸಭೆಯ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಪುಟ ಸಭೆಯ ಸದಸ್ಯರು, ರಾಜ್ಯಪಾಲರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜತಾಂತ್ರಿಕ ಕಚೇರಿಗಳ ವರಿಷ್ಠರು, ಸಂಸತ್ ಸದಸ್ಯರು, ಸರಕಾರದ ಪ್ರಮುಖ ನಾಗರಿಕ ಹಾಗೂ ಸೇನಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಸತ್‌ನ ಸೆಂಟ್ರಲ್‌ಹಾಲ್‌ನಲ್ಲಿನ ಕಾರ್ಯಕ್ರಮ ಸಮಾರೋಪಗೊಂಡ ಆನಂತರ ನೂತನ ರಾಷ್ಟ್ರಪತಿಯವರು ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ. ಅಲ್ಲಿನ ಅಂಗಣದಲ್ಲಿ ನಡೆಯಲಿರುವ ಅವರು ಸೇನಾಪಡೆಗಳಿಂದ ಗೌರವರಕ್ಷೆಯನ್ನು ಸ್ವೀಕರಿಸಲಿದ್ದಾರೆ ಹಾಗೂ ನಿರ್ಗಮನ ರಾಷ್ಟ್ರಪತಿಯ ಅವರನ್ನು ಹಾರ್ದಿಕವಾಗಿ ಬೀಳ್ಕೊಡಲಾಗುವುದು.
64 ವರ್ಷದ ಮುರ್ಮು ಅವರು ಪ್ರತಿಪಕ್ಷಗಳ ಜಂಟಿ ಅಭ್ಛರ್ಥಿ ಯಶವಂತ್ ಸಿನ್ಹಾ ಅವರನ್ನು ಪರಾಭವಗೊಳಿಸಿ ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಮುರ್ಮು ಅವರು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಎರಡನೆ ಮಹಿಳೆಯಾಗಿದ್ದಾರೆ ಹಾಗೂ ದೇಶದ ಈ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರಿದ ಮೊದಲ ಬುಡಕಟ್ಟು ವ್ಯಕ್ತಿಯೆಂಬ ದಾಖಲೆಯನ್ನು ಕೂಡಾ ಅವರು ನಿರ್ಮಿಸಿದ್ದಾರೆ.







