ಲಕ್ನೋ:ಲುಲು ಮಾಲ್ ನಮಾಝ್ ಪ್ರಕರಣದಲ್ಲಿ ಇನ್ನಿಬ್ಬರ ಸೆರೆ; ಬಂಧಿತರ ಸಂಖ್ಯೆ ಏಳಕ್ಕೇರಿಕೆ

ಲಕ್ನೋ.ಜು.24: ಇಲ್ಲಿಯ ಲುಲು ಮಾಲ್‌ನಲ್ಲಿ ‘ಅನಧಿಕೃತ ’ವಾಗಿ ನಮಾಝ್ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರನ್ನು ಪೊಲೀಸರು ರವಿವಾರ ಬಂಧಿಸಿದ್ದು,ಇದರೊಂದಿಗೆ ಬಂಧಿತರ ಒಟ್ಟು ಸಂಖ್ಯೆ ಏಳಕ್ಕೇರಿದೆ.
ಬಂಧಿತ ಆರೋಪಿಗಳು ಲಕ್ನೋದ ಸಾದತ್‌ಗಂಜ್ ಪ್ರದೇಶದ ನಿವಾಸಿಗಳಾಗಿದ್ದು,ಮಾಲ್ ಆವರಣದಲ್ಲಿ ಅನುಮತಿಯಿಲ್ಲದೆ ನಮಾಝ್ ಸಲ್ಲಿಸಿದವರಲ್ಲಿ ಸೇರಿದ್ದರು. ಪ್ರಕರಣದಲ್ಲಿಯ ಇತರ ಆರೋಪಿಗಳ ಬಂಧನಕ್ಕಾಗಿ ಪ್ರಯತ್ನಗಳು ಜಾರಿಯಲ್ಲಿವೆ ಎಂದು ಹೆಚ್ಚುವರಿ ಡಿಸಿಪಿ ರಾಜೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದರು. ಬಂಧಿತರಲ್ಲಿ ಲುಲು ಮಾಲ್‌ನ ಯಾವುದೇ ಸಿಬ್ಬಂದಿ ಸೇರಿಲ್ಲ. ಮುಖ್ಯಮಂತ್ರಿ ಆದಿತ್ಯನಾಥ ಅವರು ಇತ್ತೀಚಿಗೆ ಈ ಮಾಲ್ ಅನ್ನು ಉದ್ಘಾಟಿಸಿದ್ದರು.
ಮಾಲ್ ಆವರಣದಲ್ಲಿ ನಮಾಝ್ ಸಲ್ಲಿಕೆಯನ್ನು ಆಕ್ಷೇಪಿಸಿದ್ದ ಬಲಪಂಥೀಯ ಹಿಂದು ಸಂಘಟನೆಯು ಅಲ್ಲಿ ಹನುಮಾನ ಚಾಲೀಸಾ ಪಠಣಕ್ಕೆ ಅನುಮತಿ ಕೋರಿದ ಬಳಿಕ ಘಟನೆಯು ವಿವಾದವನ್ನು ಸೃಷ್ಟಿಸಿತ್ತು. ಘಟನೆಯ ಬಳಿಕ ಪೊಲೀಸರು ಮಾಲ್ ಬಳಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
Next Story





