ಕಾರ್ಕಳವನ್ನು ಎಲ್ಲಾ ಕ್ಷೇತ್ರದಲ್ಲಿ ಬ್ರಾಂಡ್ ಮಾಡುವುದೇ ಸ್ವರ್ಣ ಕಾರ್ಕಳದ ಪರಿಕಲ್ಪನೆ: ಸಚಿವ ಸುನಿಲ್ ಕುಮಾರ್

ಕಾರ್ಕಳ: ಕಾರ್ಕಳದ ರೈತರ ಬೆಳೆಯನ್ನು ಮಾತ್ರ ಬ್ರಾಂಡ್ ಮಾಡುವುದಲ್ಲ ,ಕಾರ್ಕಳ ವಿಧಾನಸಭಾ ಕ್ಷೇತ್ರವನ್ನೇ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ನೂರಾರು ಕಿಂಡಿ ಅಣೆಕಟ್ಟುಗಳು, ಸಾಂಸ್ಕೃತಿಕವಾಗಿ ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ನಡೆದ ಅಭೂತಪೂರ್ವ ಕಾರ್ಕಳ ಉತ್ಸವ, ಮೂಲಸೌಕರ್ಯ ಅಭಿವೃದ್ಧಿಯ ನಿಟ್ಟಿನಲ್ಲಿ ಗ್ರಾಮ ಗ್ರಾಮಗಳ ರಸ್ತೆ ಅಭಿವೃದ್ಧಿಗಳು ಸ್ವರ್ಣ ಕಾರ್ಕಳದ ಪರಿಕಲ್ಪನೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಕಾರ್ಕಳವನ್ನು ಗುರುತಿಸುವ ಕೆಲಸ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಯವರ ಕನಸನ್ನು ಸಾಕಾರಗೊಳಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ತೋಟಗಾರಿಕಾ ಇಲಾಖೆ, ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘ,ರೈತ ಉತ್ಪಾದಕ ಕಂಪೆನಿ ಕಾರ್ಕಳ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 24 ರಂದು ಕಾರ್ಕಳ ಎಪಿಎಂಸಿ ಆವರಣದಲ್ಲಿ ನಡೆದ
ನಮ್ಮ ಬೆಳೆ ನಮ್ಮ ಬ್ರಾಂಡ್ - ಕಾರ್ಕಳ ಬಿಳಿ ಬೆಂಡೆ ಬೀಜ ವಿತರಣೆ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಅಭಿವೃದ್ಧಿ ಕಾರ್ಯಗಳು ಸ್ವರ್ಣ ಕಾರ್ಕಳದ ಭಾಗವಾಗಿ ಮುಂದುವರಿಯುತ್ತಿದ್ದು, ಇದಕ್ಕೆ ಜನತೆಯ ಸಹಕಾರ ಪ್ರೋತ್ಸಾಹ ಅಗತ್ಯ ಎಂದರು.
ಕಾಮಗಾರಿಗಳಿಗೆ ಅಡ್ಡಿಪಡಿಸುವ ಬೇಜವಾಬ್ದಾರಿ ಜನಪ್ರತಿನಿಧಿಗಳಾಗದೇ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಕೈಜೋಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ತೋಟಗಾರಿಕಾ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಅಂತೋನಿ ಡಿ ಸೋಜಾ, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್,ರೈತ ಉತ್ಪಾದಕ ಕಂಪೆನಿಯ ಉಪಾಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಲಕ್ಷಣ್, ಡಾ.ಧನಂಜಯ ಬಿ , ಮುಂತಾದವರು ಉಪಸ್ಥಿತರಿದ್ದರು. ಕಾರ್ಕಳ ಪುರಸಭಾಧ್ಯಕ್ಷೆ ಸುಮಾ ಕೇಶವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರೈತರ ಜತಗಿನ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಬ್ರಹ್ಮಾವರ ತೋಟಗಾರಿಕಾ ತಜ್ಞರಾದ ಡಾ. ಚೈತನ್ಯ ಎಚ್ ,ಎಸ್, ಡಾ.ಶಿವಕುಮಾರ್ ಭಾಗವಹಿಸಿ ಉಪಯುಕ್ತ ಮಾಹಿತಿ ನೀಡಿದರು. ತೋಟಗಾರಿಕಾ ಉಪನಿರ್ದೇಶಕಿ ಭುವನೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಕಳ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿ, ಕಾರ್ಕಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ರಾವ್ ವಂದಿಸಿದರು. ರೈತ ಉತ್ಪಾದಕ ಸಂಸ್ಥೆಯ ಸಿಇಓ ಪ್ರಮಿತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.