ಫಿಲಿಪ್ಪೀನ್ಸ್: ವಿವಿ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ; 3 ಮಂದಿ ಮೃತ್ಯು

image source: REUTERS
ಮನಿಲಾ, ಜು.24: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ವಿವಿಯ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 3 ಮಂದಿ ಮೃತಪಟ್ಟಿದ್ದು ಇದು ಉದ್ದೇಶಿತ ಹತ್ಯೆಯಾಗಿರುವ ಸಾಧ್ಯತೆಯಿ ದೆ ಎಂದು ಪೊಲೀಸರು ಹೇಳಿದ್ದಾರೆ.
ರವಿವಾರ ಅಟೇನಿಯೊ ಡಿ ಮನಿಲಾ ವಿವಿಯ ಕಾನೂನು ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿದೆ. ವಿದ್ಯಾರ್ಥಿಗಳು ಕುಟುಂಬದ ಸದಸ್ಯರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದರು. ಫಿಲಿಪ್ಪೀನ್ಸ್ ನ ದಕ್ಷಿಣದಲ್ಲಿರುವ ಪ್ರಕ್ಷುಬ್ಧ ಬಸಿಲನ್ ಪ್ರಾಂತದ ಮಾಜಿ ಮೇಯರ್ ರೋಸ್ ಫ್ಯುರಿಗೆಯ್, ಅವರ ಕಾರ್ಯನಿರ್ವಾಹಕ ಸಹಾಯಕ ಮತ್ತು ವಿವಿಯ ಭದ್ರತಾ ಸಿಬಂದಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಫ್ಯುರಿಗೆಯ್ ಅವರ ಪುತ್ರಿಯೂ ಪದವಿ ಪ್ರಮಾಣಪತ್ರ ಪಡೆಯುವವರಲ್ಲಿ ಸೇರಿದ್ದರು. ಆಕೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯಿಂದ ತೀವ್ರ ಆಘಾತಗೊಂಡಿದ್ದೇವೆ ಎಂದು ಸ್ಥಳೀಯ ಮೇಯರ್ ಜಾಯ್ ಬೆಲ್ಮೋಂಟ್ ಪ್ರತಿಕ್ರಿಯಿಸಿದ್ದಾರೆ. ಫಿಲಿಪ್ಪೀನ್ಸ್ನ ಶಾಲೆಗಳಲ್ಲಿ ಗುಂಡು ಹಾರಾಟದ ಪ್ರಕರಣ ಅತ್ಯಂತ ಅಪರೂಪವಾಗಿವೆ. ಆದರೆ ರಾಜಕಾರಣಿಗಳ ಉದ್ದೇಶಿತ ಹತ್ಯೆ ಪ್ರಕರಣಗಳು ಸಾಮಾನ್ಯವಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.