ಇಸ್ರೇಲ್ ಸೇನೆಯಿಂದ ಕಾರ್ಯಾಚರಣೆ: ಇಬ್ಬರು ಫೆಲೆಸ್ತೀನೀಯರ ಹತ್ಯೆ

ಜೆರುಸಲೇಂ, ಜು.24: ಆಕ್ರಮಿತ ಪಶ್ಚಿಮ ದಂಡೆಯ ನಬ್ಲೂಸ್ ನಗರದಲ್ಲಿ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಪೆಲೆಸ್ತೀನೀಯರು ಹತರಾಗಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.
25 ವರ್ಷದ ಮುಹಮ್ಮದ್ ಅಝೀರ್ ನ ಎದೆಭಾಗಕ್ಕೆ ಮತ್ತು 28 ವರ್ಷದ ಅಬ್ದುಲ್ ರಹ್ಮಾನ್ ಜಮಾಲ್ ನ ತಲೆಗೆ ಗುಂಡೇಟು ಬಿದ್ದಿದೆ ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ. ಶನಿವಾರ ಮಧ್ಯರಾತ್ರಿ ಬಳಿಕ ನಬ್ಲೂಸ್ ನಗರದ ಪಕ್ಕದ ಅಲ್ ಯಸ್ಮಿನಾ ಪಟ್ಟಣಕ್ಕೆ ನುಗ್ಗಿದ ಇಸ್ರೇಲ್ ಸೇನೆ ಅಲ್ಲಿದ್ದ ಮನೆಯೊಂದನ್ನು ಸುತ್ತುವರಿದಿದೆ. ಬಳಿಕ ಮನೆಯ ಮೇಲೆ ಸ್ಫೋಟಕ ಎಸೆದು ಗುಂಡಿನ ದಾಳಿ ನಡೆಸಿದಾಗ ಇಬ್ಬರು ಪೆಲೆಸ್ತೀನೀಯರು ಹತರಾಗಿದ್ದಾರೆ ಎಂದು ಪೆಲೆಸ್ತೀನ್ ಸುದ್ಧಿಸಂಸ್ಥೆ ವಫಾ ವರದಿ ಮಾಡಿದೆ. ಇತರ ಕನಿಷ್ಟ 12 ಮಂದಿ ಗಾಯಗೊಂಡಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೆಲೆಸ್ತೀನ್ ರೆಡ್ ಕ್ರೆಸೆಂಟ್ ಮಾಹಿತಿ ನೀಡಿದೆ. ಮನೆಯನ್ನು ಸುತ್ತುವರಿದ ಇಸ್ರೇಲ್ ಸೇನೆ, ಓರ್ವನ ಹೆಸರನ್ನು ಉಲ್ಲೇಖಿಸಿ ಮನೆಯಿಂದ ಹೊರಬರುವಂತೆ ಸೂಚಿಸಿದೆ. ಬಳಿಕ ಸ್ಫೋಟಕ ಎಸೆದು ಗುಂಡು ಹಾರಿಸಿದೆ ಎಂದು ನೆರೆಮನೆಯ ವ್ಯಕ್ತಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಬ್ಲೂಸ್ ಓಲ್ಡ್ ಸಿಟಿಯಲ್ಲಿ ಆಕ್ರಮಣ ಪಡೆಯಿಂದ ಮತ್ತೊಂದು ಅಪರಾಧ ಘಟಿಸಿದೆ. 3 ಮಂದಿ ಮರಣ ಹೊಂದಿದ್ದು ಹಲವರು ಗಾಯಗೊಂಡಿದ್ದಾರೆ. ಈ ಅಪರಾಧವನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಈ ಅಪರಾಧಕ್ಕೆ ಆಕ್ರಮಣ ಪಡೆಯನ್ನು ಹೊಣೆಯಾಗಿಸಬೇಕು ಎಂದು ಹಿರಿಯ ಪೆಲೆಸ್ತೀನ್ ಅಧಿಕಾರಿ ಹುಸೈನ್ ಅಲ್ ಶೇಖ್ ಪ್ರತಿಕ್ರಿಯಿಸಿದ್ದಾರೆ.
ನೆಬ್ಲೂಸ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಮನೆಯೊಂದರಲ್ಲಿ ಶಂಕಿತ ಉಗ್ರರ ಬಗ್ಗೆ ಸುಳಿವು ಲಭಿಸಿದೆ. ಸೇನೆ ಅಲ್ಲಿಗೆ ತೆರಳಿದಾಗ ಮನೆಯೊಳಗಿಂದ ಗುಂಡಿನ ದಾಳಿ ನಡೆದಿದ್ದು ಯೋಧರು ಪ್ರತ್ಯುತ್ತರ ನೀಡಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದ್ದು, ಸಾವು ನೋವಿನ ಬಗ್ಗೆ ಉಲ್ಲೇಖಿಸಿಲ್ಲ.
ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಪಡೆಗಳ ಕಾರ್ಯಾಚರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದನ್ನು ಮತ್ತು ಶನಿವಾರದ ಕಾರ್ಯಾಚರಣೆಯಲ್ಲಿ ಪೆಲೆಸ್ತೀನ್ ಯುವಕರು ಹತ್ಯೆಯಾಗಿರುವುದನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.







