ನಾರಾಯಣ ಗುರು ಆದರ್ಶ ಪಾಲಿಸಿ: ವಿಖ್ಯಾತನಂದ ಸ್ವಾಮೀಜಿ

ಬೆಂಗಳೂರು, ಜು.24: ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು- ಎಂದು ತಳವರ್ಗದ ಜನರಿಗೆ ಬೋಧಿಸುವ ಮೂಲಕ ಆಧ್ಯಾತ್ಮಿಕ ಕ್ರಾಂತಿ ಮಾಡಿದ ಸಮಾಜ ಸುಧಾರಕ ನಾರಾಯಣ ಗುರು ಅವರ ಆದರ್ಶಗಳನ್ನು ಯುವ ಜನರು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಆರ್ಯ ಈಡಿಗ ಮಹಾಸಂಸ್ಥಾನ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ರವಿವಾರ ನಗರದ ವಿಲ್ಸನ್ ಗಾರ್ಡನ್‍ನಲ್ಲಿ ತೀಯಾ ಸಮಾಜ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಥೆಯ 19ನೆ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ವಿದ್ಯಾವಂತರು, ನೀತಿವಂತರು, ಪ್ರಜ್ಞಾವಂತರಾಗಬೇಕು ಎಂಬ ಉದ್ದೇಶದಿಂದ ನಾರಾಯಣ ಗುರು ಅವರು ಕಾಲ್ನಡಿಗೆಯಲ್ಲಿ ಸಂಚರಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಮಹಿಳೆಯರನ್ನು ಹೀನಾಯವಾಗಿ ನೋಡುತ್ತಿದ್ದ ಕಾಲದಲ್ಲಿ ಮಹಿಳೆಗೆ ಘನತೆ ದೊರಕಿಸಿಕೊಡಲು ಶ್ರಮಿಸಿದರು ಎಂದು ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ತೀಯಾ ಸಮಾಜ ಅಧ್ಯಕ್ಷ ಸದಾಶಿವ ಉಲ್ಲಾಳ್ ಮಾತನಾಡಿ, ಸಾಮಾಜಿಕ ಸೇವೆಯಿಂದ ಬದಲಾವಣೆಗೆ ಮುಂದಾದ ನಾರಾಯಣ ಗುರು ಅವರು ಅನಕ್ಷರತೆ ನಿವಾರಣೆ, ಮಹಿಳಾ ಶಿಕ್ಷಣ, ಅಸ್ಪೃಶ್ಯತೆ ನಿವಾರಣೆ, ಸರಳ ವಿವಾಹಕ್ಕೆ ಹೆಚ್ಚಿನ ಒತ್ತು ನೀಡಿದರು. ಅದರ ಫಲವಾಗಿ ಆ ರಾಜ್ಯ ಶೈಕ್ಷಣಿಕ, ಸಾಮಾಜಿಕ ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಪಥದಲ್ಲಿ ಮುಂದುವರಿಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತೀಯಾ ಸಮಾಜದ ಮುಖಂಡರಾದ ಡಾ.ಅರುಣ್ ಉಲ್ಲಾಳ, ಎನ್.ಸುಕುಮಾರ್ ಸೇರಿದಂತೆ ಪ್ರಮುಖರಿದ್ದರು.







