ಪರಿಸರ-ಮನುಷ್ಯ ಸಂಘರ್ಷದ ನಡುವೆ ಕಸ್ತೂರಿ ರಂಗನ್ ವರದಿ

ಪಶ್ಚಿಮ ಘಟ್ಟದಲ್ಲಿ ಸದಾ ಎರಡು ಬಗೆಯ ತಲ್ಲಣಗಳು. ಒಂದು ಸಹ್ಯಾದ್ರಿಯೊಡಲ ಮೂಕವೇದನೆ; ಇನ್ನೊಂದು ಅಲ್ಲಿ ನೆಲೆ ಕಂಡುಕೊಂಡಿರುವ ಜನರಿಗೆ ತಮ್ಮ ಬದುಕೆಲ್ಲಿ ಬೀದಿಗೆ ಬರುತ್ತದೋ ಎಂಬ ಆತಂಕ. ಒಂದು ಪರಿಸರಕ್ಕೆ ಸಂಬಂಧಿಸಿದ್ದು, ಇನ್ನೊಂದು ಜನರ ಬದುಕಿನದ್ದು. ಈಗ ಮತ್ತೊಮ್ಮೆ ಅಂಥದೇ ಸನ್ನಿವೇಶ. ಕಸ್ತೂರಿರಂಗನ್ ವರದಿ ಅನುಷ್ಠಾನ ಸಂಬಂಧ ಕೇಂದ್ರ ಹೊಸದಾಗಿ ಹೊರಡಿಸಿರುವ ಅಧಿಸೂಚನೆಯೇ ಇದಕ್ಕೆ ಕಾರಣ.
ಪಶ್ಚಿಮ ಘಟ್ಟ ಸಂರಕ್ಷಣೆ ವಿಚಾರವಾಗಿ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಕೇಂದ್ರ ಪರಿಸರ ಇಲಾಖೆ ಐದನೇ ಕರಡು ಅಧಿಸೂಚನೆಯನ್ನು ಇತ್ತೀಚೆಗಷ್ಟೆ ಹೊರಡಿಸಿದೆ. ಪಶ್ಚಿಮಘಟ್ಟ ವಲಯದಲ್ಲಿ ಇದು ಬಹುದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಕಸ್ತೂರಿ ರಂಗನ್ ವರದಿ ಶಿಫಾರಸಿನಂತೆ ಪಶ್ಚಿಮ ಘಟ್ಟದ 59,949 ಚ.ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಅಂದರೆ ಶೇ.36.4ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ ಪ್ರದೇಶ ಎಂದು ಘೋಷಿಸಬೇಕಾಗುತ್ತದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳ ಭಾಗಗಳು ಈ ವ್ಯಾಪ್ತಿಗೆ ಬರುತ್ತಿದ್ದು, ಕರ್ನಾಟಕದ ವ್ಯಾಪ್ತಿಯಲ್ಲಿ ಬರುವುದು 20,668 ಚ. ಕಿ.ಮೀ. ಪ್ರದೇಶ. ವರದಿಯ ಶಿಫಾರಸು ಜಾರಿಗಾಗಿ ಇದೀಗ ಕೇಂದ್ರದ ಅಧಿಸೂಚನೆ ಹೊರಬಿದ್ದಿದೆ. ಇಷ್ಟು ಪ್ರದೇಶವನ್ನು ಮಾನವ ಹಸ್ತಕ್ಷೇಪ ನಿಷೇಧಿತ ಪ್ರದೇಶವನ್ನಾಗಿ ಘೋಷಿಸಿದರೆ ತಮ್ಮ ಪಾಡೇನು ಎಂಬುದು ಸ್ಥಳೀಯರ ಕೂಗು.
ಈ ಎಲ್ಲ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳಿಗೆ ಬರುವ ಮೊದಲು ಕಸ್ತೂರಿ ರಂಗನ್ ವರದಿಯ ಹಿನ್ನೆಲೆ, ಅದರಲ್ಲೇನಿದೆ ಮೊದಲಾದ ವಿಚಾರಗಳನ್ನು ಒಮ್ಮೆ ಗಮನಿಸಬೇಕು. ಸಹ್ಯಾದ್ರಿ ಎಂದು ಕರೆಯಲಾಗುವ ಪಶ್ಚಿಮ ಘಟ್ಟಗಳು ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಯಲ್ಲಿ ಹಬ್ಬಿವೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿರುವ ಈ ಪರ್ವತಶ್ರೇಣಿಯ ಒಟ್ಟು ವಿಸ್ತೀರ್ಣ 1,64,280 ಚ.ಕೀ.ಮೀ. ಪಶ್ಚಿಮ ಘಟ್ಟಗಳ ಕುರಿತ ಚರ್ಚೆಯೆಂದರೆ ಮೊದಲು ನೆನಪಾ ಗುವುದು 1980ರ ಮೌನಕಣಿವೆ ಹೋರಾಟ. ಆನಂತರ ಅಪ್ಪಿಕೋ ಚಳವಳಿ, ಪಶ್ಚಿಮ ಘಟ್ಟ ಉಳಿಸಿ ಆಂದೋಲನಗಳೆಲ್ಲ ನಡೆದಿವೆ. ಅವೆಲ್ಲ ಹೋರಾಟಗಳ ಯಶಸ್ಸಿನ ನಂತರವೂ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಮಾತು ಮಾತಲ್ಲಿಯೇ ಉಳಿದುಹೋಗಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಅಡಿ ಪಶ್ಚಿಮಘಟ್ಟವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲಾಯಿತಾದರೂ, ಅಭಿವೃದ್ಧಿ ಯೋಜನೆಗಳ ಸತತ ದಾಳಿಯನ್ನು ತಡೆಯಲು ಅದರಿಂದಾಗಿಲ್ಲ. ಶಾಸನಾತ್ಮಕವಾಗಿ ಪಶ್ಚಿಮಘಟ್ಟ ರಕ್ಷಣೆಗೆ ಬಲ ಸಿಕ್ಕಿದ್ದು 2010ರಲ್ಲಿ ಕೋಟಗಿರಿಯಲ್ಲಿ ನಡೆದ ಪಶ್ಚಿಮ ಘಟ್ಟಗಳ ಸಮಾವೇಶದಲ್ಲಿ. ಆಗ ಪರಿಸರ ಸಚಿವರಾಗಿದ್ದ ಜೈರಾಮ್ ರಮೇಶ್ ಪರಿಣತರ ಸಮಿತಿ ನೇಮಿಸಿ ಇಲ್ಲಿನ ಸಮಸ್ಯೆಗಳನ್ನು ಅಧ್ಯಯನಿಸುವುದಾಗಿ ಸಮಾವೇಶದಲ್ಲಿ ಘೋಷಿಸಿದ ಪರಿಣಾಮವೇ ಮಾಧವ ಗಾಡ್ಗೀಳ್ ನೇತೃತ್ವದ ಗಾಡ್ಗೀಳ್ ಸಮಿತಿ ರಚನೆ. 12 ಮಂದಿಯ ಈ ಸಮಿತಿಯಲ್ಲಿ ಪಶ್ಚಿಮಘಟ್ಟದಿಂದ ಬಂದ ವರೇ ಹನ್ನೊಂದು ಮಂದಿಯಿದ್ದರು. ಸಾಧ್ಯವಾದಷ್ಟೂ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸಮುದಾಯಗಳೊಡನೆ, ಭಾಗೀದಾರರೊಡನೆ ಸಂವಾದ ನಡೆಸಿ 2011ರ ಆಗಸ್ಟ್‌ನಲ್ಲಿ ಎರಡು ಸಂಪುಟಗಳ ವರದಿಯನ್ನು ಕೇಂದ್ರ ಸರಕಾರಕ್ಕೆ ಗಾಡ್ಗೀಳ್ ಸಮಿತಿ ಸಲ್ಲಿಸಿತು. ಅಷ್ಟೆ. ವರದಿ ಸಲ್ಲಿಕೆಯಾಗಿದೆ ಎಂದು ಸರಕಾರ ಹೇಳಿದ್ದೇ ಒಂದು ವರ್ಷದ ಬಳಿಕ. ವರದಿಯನ್ನು ಸಾರ್ವಜನಿಕಗೊಳಿಸಲೂ ನಿರಾಕರಿಸಿತು. ಕಡೆಗೆ ನ್ಯಾಯಾಲಯವೇ ಆದೇಶಿಸಬೇಕಾಯಿತು. ಪಶ್ಚಿಮಘಟ್ಟದ ಶೇ.78ಕ್ಕೂ ಹೆಚ್ಚು ಪ್ರದೇಶಗಳಿಗೆ ಅಂದರೆ 1,29,037ಚ.ಕಿ.ಮೀ. ಪ್ರದೇಶಕ್ಕೆ ಸಂರಕ್ಷಣೆ ನೀಡಬೇಕೆಂದು ಶಿಫಾರಸು ಮಾಡಿದ್ದ ಗಾಡ್ಗೀಳ್ ವರದಿಯನ್ನು ಅಂಗೀಕರಿಸುವ ಗೋಜಿಗೇ ಹೋಗಲಿಲ್ಲ ಸರಕಾರ. ಬದಲಿಗೆ ಕಸ್ತೂರಿರಂಗನ್ ನೇತೃತ್ವದ ಮತ್ತೊಂದು ಸಮಿತಿಯನ್ನು ನೇಮಿಸಿತು. ಗಾಡ್ಗೀಳ್ ವರದಿಯನ್ನು ತೆಳುಗೊಳಿಸಲೆಂದೇ ರಚಿಸಿದ್ದ ಸಮಿತಿ ಇದಾಗಿತ್ತು. ಅದರಂತೆಯೇ, ಕಸ್ತೂರಿ ರಂಗನ್ ಸಮಿತಿಯು 2013ರ ಎಪ್ರಿಲ್‌ನಲ್ಲಿ ಸಲ್ಲಿಸಿದ ವರದಿಯಲ್ಲಿ ಶೇ.37ರಷ್ಟು ಪ್ರದೇಶವನ್ನು ಸಂರಕ್ಷಣೆಗೆ ಒಳಪಡಿಸುವಂತೆ ಹೇಳಿತು. ಅಂದರೆ ಸಂರಕ್ಷಿಸಬೇಕಾದ ಪ್ರದೇಶಗಳ ವ್ಯಾಪ್ತಿ ಅರ್ಧದಷ್ಟಕ್ಕೆ ಇಳಿಯುವುದರೊಂದಿಗೆ ಸರಕಾರದ ಮೇಲಿನ ಭಾರವೂ ಇಳಿಯುವುದಕ್ಕೆ ಈ ವರದಿ ನೆರವಾಯಿತು. ಸಂರಕ್ಷಿತ ಎಂದು ಗುರುತಿಸಲಾದ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ದೊಡ್ಡ ಜಲಯೋಜನೆಗಳನ್ನು ಕೈಗೊಳ್ಳದಂತೆ ಗಾಡ್ಗೀಳ್ ವರದಿ ಹೇಳಿದ್ದರೆ, ಕಸ್ತೂರಿ ರಂಗನ್ ವರದಿ ಸರಕಾರದ ಯೋಜನೆಗಳಿಗೆ ಧಕ್ಕೆ ಭಾರದ ರೀತಿಯಲ್ಲಿ ಸಂರಕ್ಷಣಾ ವಲಯವನ್ನು ಗುರುತಿಸಿತ್ತು. ಮತ್ತು ಲೈಸೆನ್ಸ್ ಇರುವವರೆಗೂ ಏನೂ ಮಾಡಬಹುದು ಎಂಬ ಸುಳಿವನ್ನೂ ಅದು ಕೊಟ್ಟಿತ್ತು.
ಕಸ್ತೂರಿರಂಗನ್ ಸಮಿತಿ ವರದಿ ಶಿಫಾರಸಿನಂತೆ, ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಸಂರಕ್ಷಿತ 59,949 ಚ.ಕಿ.ಮೀ. ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಉಷ್ಣ ವಿದ್ಯುತ್, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳು ಸಂಪೂರ್ಣ ನಿಷೇಧಿತ. ವರದಿ ಜಾರಿಯಾದ ಬಳಿಕ ಮುಂದಿನ 5 ವರ್ಷದೊಳಗೆ ಈಗಿರುವ ಎಲ್ಲ ರೀತಿಯ ಗಣಿಗಾರಿಕೆ ಸ್ಥಗಿತವಾಗಬೇಕು. 20,000 ಚ.ಮೀ.ಗಿಂತ ಹೆಚ್ಚು ವಿಸ್ತೀರ್ಣದ ಯಾವುದೇ ನಿರ್ಮಾಣ ಕೈಗೆತ್ತಿಕೊಳ್ಳುವಂತಿಲ್ಲ. ಇಎಸ್‌ಎ ಅಥವಾ ಇಕಾಲಜಿಕಲಿ ಸೆನ್ಸಿಟಿವ್ ಏರಿಯಾ ಅಂದರೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳಿಗೆ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟ್, ಕಲ್ಲು, ರಾಸಾಯನಿಕ ಬಳಕೆ, ಜನವಸತಿ ನಿರ್ಮಾಣಕ್ಕೆ ಅವಕಾಶವಿರುವುದಿಲ್ಲ. ಇಲ್ಲಿ, 20,000 ಚ.ಮೀ. ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿರ್ಮಾಣಕ್ಕೆ ಅವಕಾಶವಿಲ್ಲ. ಅಂದರೆ 19,999 ಚ.ಮೀ. ವಿಸ್ತೀರ್ಣದ ನಿರ್ಮಾಣಕ್ಕೆ ಅವಕಾಶವಿದೆ. ಹಾಗೆಯೇ 50 ಹೆಕ್ಟೇರ್ ವಿಸ್ತೀರ್ಣದ ವಸತಿ ಯೋಜನೆ ಮತ್ತು 1.5 ಲಕ್ಷ ಚ.ಮೀ. ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ ನಿಷೇಧವಿದೆಯಾದರೂ, ಅದಕ್ಕಿಂತ ಕಡಿಮೆ ವಿಸ್ತೀರ್ಣದ ನಿರ್ಮಾಣಕ್ಕೆ ಅವಕಾಶವಿದೆ. ಹೀಗೆ ಸರಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿಯೇ ಕಸ್ತೂರಿ ರಂಗನ್ ವರದಿ ಶಿಫಾರಸುಗಳು ಇದ್ದವು.ಈ ವರದಿಯನ್ನು ಅನುಷ್ಠಾನಕ್ಕೆ ಸ್ವೀಕರಿಸಿದ ಬಳಿಕ ಕೇಂದ್ರ ಮೊದಲು ಅಧಿಸೂಚನೆ ಹೊರಡಿಸಿದ್ದು 2013ರ ನವೆಂಬರ್ 13ರಂದು. ಪರಿಸರ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್ ಸಮಿತಿ ಗುರುತಿಸಿದ್ದ 59,949 ಚ.ಕಿ.ಮೀ. ಪ್ರದೇಶವನ್ನು 2018ರಲ್ಲಿ 56,825 ಚ.ಕಿ.ಮೀ.ಗೆ ಇಳಿಸಲಾಯಿತು. ಅಧಿಸೂಚನೆ ಬಳಿಕ ರಾಜ್ಯಗಳಿಂದ ಕೇಂದ್ರ ಪ್ರತಿಕ್ರಿಯೆ ಕೇಳಿತು. ಎಲ್ಲ ರಾಜ್ಯಗಳೂ ಪ್ರಸ್ತಾವನೆ ವಿರೋಧಿಸಿದವು. ಕೇರಳ ಸರಕಾರವಂತೂ 2013ರಲ್ಲಿ ಊಮ್ಮನ್ ಸಮಿತಿ ರಚಿಸಿತು. ಆ ಸಮಿತಿಯು ಅರಣ್ಯ ಹಾಗೂ ಸಂರಕ್ಷಿತ ಪ್ರದೇಶ ಹೊರತುಪಡಿಸಿ ಉಳಿದೆಡೆಗಿನ ನಿರ್ಬಂಧಗಳನ್ನೆಲ್ಲ ತೆಗೆದುಹಾಕಿತು. ಮಹಾರಾಷ್ಟ್ರ ಮತ್ತು ಗೋವಾ ಸರಕಾರಗಳು ಅಧಿಸೂಚನೆಯಲ್ಲಿರುವ ಗ್ರಾಮಗಳ ಸಂಖ್ಯೆ ಕಡಿತಕ್ಕೆ ಒತ್ತಾಯಿಸಿವೆ.. ಕರ್ನಾಟಕ ಸರಕಾರ ಕೂಡ ಆರಂಭದಿಂದಲೇ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಲ್ಲ. ಈಗ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕೇಂದ್ರ ಮತ್ತೊಂದುಅಧಿಸೂಚನೆ ಹೊರಡಿಸಿದ್ದು, ಪರಿಸರ ಸೂಕ್ಷ್ಮಪ್ರದೇಶ ವ್ಯಾಪ್ತಿಯಿಂದ ಕೇರಳ ತಪ್ಪಿಸಿಕೊಂಡಿದೆ. ಕೇಂದ್ರದ ಹೊಸ ಅಧಿಸೂಚನೆಯಲ್ಲಿ ಕೇರಳವನ್ನು ಕೈಬಿಡಲಾಗಿದೆ. ಉಳಿದಂತೆ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಾಗಿರುವ ಅತಿ ಹೆಚ್ಚು ಪ್ರದೇಶ ಬರುವುದು ಕರ್ನಾಟಕದ ವ್ಯಾಪ್ತಿಯಲ್ಲಿ. ಅಧಿಸೂಚನೆಯಂತೆ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅನಂತರದ ಪರಿಣಾಮಗಳು ಎಂಥವು ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣ. ಹಾಗಾಗಿಯೇ ಮಲೆನಾಡು ಮತ್ತು ಕರಾವಳಿಯ ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು. ಜನಪ್ರತಿನಿಧಿಗಳು ಮತ್ತು ರಾಜ್ಯ ಸರಕಾರ ಕೂಡ ಈಗಾಗಲೇ ಇದರ ವಿರುದ್ಧ ನಿಂತಾಗಿದೆ. ಹೊಸ ಅಧಿಸೂಚನೆಯಲ್ಲಿ ಉಲ್ಲೇಖವಾಗಿರುವಂತೆ, ಕೇರಳ ಹೊರತುಪಡಿಸಿದ ಬಳಿಕ ಉಳಿದಿರುವ ಐದು ರಾಜ್ಯಗಳಲ್ಲಿ ಕರ್ನಾಟಕದ 20,668 ಚ.ಕಿ.ಮೀ. ಪ್ರದೇಶ, ಗೋವಾದ 1,461 ಚ.ಕಿ.ಮೀ., ಮಹಾರಾಷ್ಟ್ರದ 17,340 ಚ.ಕಿ.ಮೀ. ತಮಿಳುನಾಡಿನ 6,914 ಚ.ಕಿ.ಮೀ. ಹಾಗೂ ಗುಜರಾತ್‌ನ 449 ಚ.ಕಿ.ಮೀ ಪ್ರದೇಶ ಗಳು ಪರಿಸರ ಸೂಕ್ಷ್ಮಪ್ರದೇಶ ವ್ಯಾಪ್ತಿಗೆ ಒಳಪಡುತ್ತವೆ. ರಾಜ್ಯ ವ್ಯಾಪ್ತಿಯಲ್ಲಿ ಬರುವ ಒಟ್ಟು ಪಶ್ಚಿಮಘಟ್ಟ ಪ್ರದೇಶ 44,448ಚ.ಕಿ.ಮೀ. ಆಗಿದ್ದು, ಇದರಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. 20,668 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶಕ್ಕೆ 1,553ಕ್ಕೂ ಹೆಚ್ಚು ಹಳ್ಳಿಗಳು ಒಳಪಡುತ್ತವೆ. ಇದನ್ನು 850 ಗ್ರಾಮಗಳಿಗೆ ಇಳಿಸಬೇಕೆಂಬ ಬೇಡಿಕೆಯೂ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಹೋಗಿದೆ. ಬೆಳಗಾವಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉಡುಪಿ, ಕೊಡಗು, ಮೈಸೂರು ಮತ್ತು ಚಾಮರಾಜನಗರದ ಭಾಗಗಳು ಈ ವ್ಯಾಪ್ತಿಯೊಳಕ್ಕೆ ಬರುತ್ತವೆ. ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡುವ ಭಾಗಗಳ ಜಿಲ್ಲಾವಾರು ವಿಸ್ತೀರ್ಣವನ್ನು ಗಮನಿಸುವುದಾದರೆ, ಬೆಳಗಾವಿ ಜಿಲ್ಲೆಯ ಖಾನಾಪುರ 62 ಹೆಕ್ಟೇರ್, ಉತ್ತರಕನ್ನಡ ಜಿಲ್ಲೆಯ ಅಂಕೋಲಾ 43 ಹೆಕ್ಟೇರ್, ಭಟ್ಕಳ 28 ಹೆಕ್ಟೇರ್, ಹೊನ್ನಾವರ 44 ಹೆಕ್ಟೇರ್, ಜೋಯ್ಡಾ 11 ಹೆಕ್ಟೇರ್, ಕಾರವಾರ 39 ಹೆಕ್ಟೇರ್, ಕುಮಟಾ 43 ಹೆಕ್ಟೇರ್, ಸಿದ್ಧಾಪುರ 107 ಹೆಕ್ಟೇರ್, ಶಿರಸಿ 125 ಹೆಕ್ಟೇರ್, ಯಲ್ಲಾಪುರ 87 ಹೆಕ್ಟೇರ್, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ 17 ಹೆಕ್ಟೇರ್, ಪುತ್ತೂರು 11 ಹೆಕ್ಟೇರ್, ಸುಳ್ಯ 18 ಹೆಕ್ಟೇರ್ , ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು 27 ಹೆಕ್ಟೇರ್, ಕೊಪ್ಪ 32 ಹೆಕ್ಟೇರ್, ಮೂಡಿಗೆರೆ 27 ಹೆಕ್ಟೇರ್, ಶೃಂಗೇರಿ 26 ಹೆಕ್ಟೇರ್, ಹಾಸನ ಜಿಲ್ಲೆಯ ಆಲೂರು 1 ಹೆಕ್ಟೇರ್, ಸಕಲೇಶಪುರ 34 ಹೆಕ್ಟೇರ್, ಶಿವಮೊಗ್ಗ ಜಿಲ್ಲೆಯ ಹೊಸನಗರ 126 ಹೆಕ್ಟೇರ್, ಸಾಗರ 134 ಹೆಕ್ಟೇರ್, ಶಿಕಾರಿಪುರ 12 ಹೆಕ್ಟೇರ್, ಶಿವಮೊಗ್ಗ 66 ಹೆಕ್ಟೇರ್, ತೀರ್ಥಹಳ್ಳಿ 146 ಹೆಕ್ಟೇರ್, ಉಡುಪಿ ಜಿಲ್ಲೆಯ ಕಾರ್ಕಳ 13 ಹೆಕ್ಟೇರ್, ಕುಂದಾಪುರ24 ಹೆಕ್ಟೇರ್, ಕೊಡಗು ಜಿಲ್ಲೆಯ ಮಡಿಕೇರಿ 23 ಹೆಕ್ಟೇರ್, ಸೋಮವಾರ ಪೇಟೆ 11 ಹೆಕ್ಟೇರ್, ವೀರಾಜಪೇಟೆ 21 ಹೆಕ್ಟೇರ್, ನರಸಿಂಹರಾಜಪುರ 35 ಹೆಕ್ಟೇರ್, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ 62 ಹೆಕ್ಟೇರ್, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ 21 ಹೆಕ್ಟೇರ್ ಪರಿಸರ ಸೂಕ್ಷ್ಮಪ್ರದೇಶ ವ್ಯಾಪ್ತಿಗೆ ಸೇರುತ್ತವೆ. ಕಸ್ತೂರಿರಂಗನ್ ಸಮಿತಿ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆ ಯಾಗುತ್ತದೆ. ಈ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗುತ್ತದೆ. ವಿದ್ಯುತ್, ನೀರಾವರಿ ಸೇರಿದಂತೆ ಯಾವುದೇ ಕೈಗಾರಿಕೆ ನಡೆಸಲು ಅವಕಾಶ ದೊರಕದು. ಈಗಿರುವ ಕೈಗಾರಿಕೆಗಳನ್ನು 5 ವರ್ಷದೊಳಗೆ ಸ್ಥಗಿತಗೊಳಿಸಬೇಕಾಗುತ್ತದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಈ ಪ್ರದೇಶಗಳ ಭೂಭಾಗದ ಮೇಲೆ ರಾಜ್ಯದ ನಿಯಂತ್ರಣ ತಪ್ಪಿ, ಕೇಂದ್ರದ ಸುಪರ್ದಿಗೆ ಒಳಪಡುತ್ತದೆ. ದೊಡ್ಡ ದುರಂತವೆಂದರೆ ಪಶ್ಚಿಮಘಟ್ಟಗಳ ಭಾಗವೇ ಆಗಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸ ಲಾಗುತ್ತದೆ ಎಂಬುದು ಈಗ ವ್ಯಕ್ತವಾಗುತ್ತಿರುವ ಆತಂಕ ಹಾಗೂ ಆರೋಪ. ಕಸ್ತೂರಿ ರಂಗನ್ ವರದಿ ಜಾರಿಗೆ ಸುಪ್ರೀಂ ಕೋರ್ಟ್ 2020ರಲ್ಲಿ ಆದೇಶ ನೀಡಿದಾಗಲೇ, ಇವೆಲ್ಲ ಆತಂಕವೂ ವ್ಯಕ್ತವಾಗಿತ್ತು. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕೃಷಿ ಮತ್ತದಕ್ಕೆ ಪೂರಕವೂ ಪರ್ಯಾಯವೂ ಆಗಿ ಜನರು ಮಾಡಿಕೊಂಡಿರುವ ವ್ಯವಸ್ಥೆಗಳು ಎಲ್ಲವೂ ಈ ವರದಿ ಜಾರಿಯಿಂದ ದಿಕ್ಕುಗೆಡುತ್ತವೆ. ಕೇರಳ ಹೇಗೆ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ತಪ್ಪಿಸಿಕೊಂಡಿದೆಯೋ ಹಾಗೆಯೇ ಕರ್ನಾಟಕ ಸರಕಾರ ಕೂಡ ತನ್ನ ನಿಲುವು ಮಂಡಿಸ ಬೇಕೆಂದೂ ಈ ಭಾಗದ ಜನರೀಗ ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಸರಕಾರ ಈಗಾಗಲೇ ಈ ಅಧಿಸೂಚನೆ ವಿರುದ್ಧ ಕಾನೂನು ಹೋರಾಟ ಮತ್ತು ದಿಲ್ಲಿಗೆ ನಿಯೋಗ ಕೊಂಡೊಯ್ಯುವ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಸಿಎಂ ನೇತೃತ್ವದಲ್ಲಿ ನಡೆದ ಮಲೆನಾಡುಮತ್ತು ಕರಾವಳಿ ಭಾಗದ ಶಾಸಕರ ಸಭೆಯಲ್ಲಿ ಈ ಕುರಿತ ತೀರ್ಮಾನ ವಾಗಿದೆ. ಹಿಂದೆ ಎರಡು ಬಾರಿ 2019 ಮತ್ತು 2020ರಲ್ಲಿ ಈ ವರದಿಗೆ ತನ್ನ ಅಸಮ್ಮತಿ ಸೂಚಿಸಿ ಕೇಂದ್ರಕ್ಕೆ ಬರೆದಿದ್ದ ರಾಜ್ಯ ಸರಕಾರ ಈಗ ಮತ್ತೊಮ್ಮೆ ವರದಿ ಜಾರಿ ವಿರುದ್ಧದ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಇನ್ನೊಂದೆಡೆ ಪರಿಸರ ತಜ್ಞರು, ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ ಹೋರಾಡಿಕೊಂಡು ಬಂದವರ ದೃಷ್ಟಿಯಲ್ಲಿ, ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ನೋವು ಇರದೇ ಇರಲಾರದು. ಹೀಗೆ ಒಂದೆಡೆ ಪರಿಸರ, ಇನ್ನೊಂದೆಡೆ ಜನರ ಬದುಕು ಇವೆರಡರ ನಡುವಿನ ಸಂಘರ್ಷದ ನೆಲೆಗೆ ಈಗ ಇದು ಬಂದು ನಿಂತಿದೆ. ಮತ್ತು ಎರಡೂ ತಲ್ಲಣಕಾರಿ ಸಂಗತಿಗಳೇ ಆಗಿವೆ. ಕಡೆಯದಾಗಿ ಎರಡು ಕಟು ವಾಸ್ತವಗಳ ಬಗ್ಗೆ ಗಮನ ಹರಿಸ ಬೇಕು. ಮೊದಲನೆಯದು, ಪಶ್ಚಿಮಘಟ್ಟಗಳನ್ನು ಸತತ ಅಭಿವೃದ್ಧಿ ಆಕ್ರಮಣಕ್ಕೆ ಬಲಿಯಾಗಿಸುತ್ತಿರುವುದರ ಪರಿಣಾಮ ಜನರ ಬದುಕಿನ ಮೇಲೆ ಹೇಗಾಗಿದೆ ಮತ್ತು ಅದೆಷ್ಟು ಕರಾಳವಾಗಿದೆ ಎಂಬುದು. ಪಶ್ಚಿಮ ಘಟ್ಟದ ಮಡಿಲಿನಲ್ಲಿ ಬದುಕುತ್ತಿರುವ ಸಮುದಾಯಗಳು, ವನ್ಯಜೀವಿಗಳು ಕಳೆದ ದಶಕದ ಅಭಿವೃದ್ಧಿ ಆಕ್ರಮಣದಿಂದ ನಲುಗಿರುವ ಬಗೆಯನ್ನು ತಜ್ಞರು ವಿವರಿಸುತ್ತಾರೆ. ಕರ್ನಾಟಕ ಹಾಗೂ ಕೇರಳದಲ್ಲಿ 2018, 2019 ಮತ್ತು 2020ರಲ್ಲಿ ಸಂಭವಿಸಿದ ಪ್ರವಾಹ ಮತ್ತು ಅದರಿಂದಾದ ಜೀವಹಾನಿ, ಆಸ್ತಿ ಹಾನಿ ಪಶ್ಚಿಮಘಟ್ಟಗಳು ಸಂಕಷ್ಟದಲ್ಲಿ ರುವ ಸೂಚನೆ ಎಂದೇ ಹೇಳುತ್ತಿದ್ದಾರೆ ಪರಿಣಿತರು. ಪ್ರವಾಹ ತಂದ ಹಾನಿ ಒಂದು ಬಗೆಯದಾದರೆ, ಭೂಕುಸಿತ ತಂದಿರುವ ಆತಂಕ ಇನ್ನೊಂದು ಬಗೆಯದು. ಭಾರತೀಯ ಭೂ ಸರ್ವೇಕ್ಷಣೆ ಇಲಾಖೆಯ ‘ಎ ನೋಟ್ ಆನ್ ದಿ ಪ್ರಿಲಿಮಿನರಿ ಪೋಸ್ಟ್ ಡಿಸಾಸ್ಟರ್ ಇನ್ವೆಸ್ಟಿಗೇಷನ್ ಆಫ್ ಲ್ಯಾಂಡ್ ಸ್ಲಯ್ಡಾ ಅಕ್ಕರ್ಡ್ ಅರೌಂಡ್ ಮಡಿಕೇರಿ, ಕೊಡಗು ಡಿಸ್ಟ್ರಿಕ್ಟ್, ಕರ್ನಾಟಕ’ ದಾಖಲಿಸುವ ಪ್ರಕಾರ, ಭೂಕುಸಿತ ಸಂಭವಿಸಲು ಹಲವು ಕಾರಣಗಳು ಇರಬಹುದಾದರೂ, ಪ್ರಮುಖ ಕಾರಣ ಭಾರೀ ಮಳೆ ಮತ್ತು ಮಾನವ ಹಸ್ತಕ್ಷೇಪದಿಂದಾದ ಇಳಿಜಾರುಗಳ ಬದಲಾವಣೆ. ಈ ಪ್ರದೇಶದಲ್ಲಿ ಭೂಮಿ ಬಳಕೆಯ ಮೇಲ್ವಿಚಾರಣೆಗೆ ಯಾವುದೇ ಮಾರ್ಗದರ್ಶಿ ಸೂತ್ರ ಅಥವಾ ನಿಯಂತ್ರಣ ವ್ಯವಸ್ಥೆ ಇಲ್ಲ. 2017ರಲ್ಲಿ ನಾಸಾ ಸೃಷ್ಟಿಸಿದ ಗ್ಲೋಬಲ್ ಲ್ಯಾಂಡ್ ಸ್ಲಯ್ಡ್ಸಾ ಸಸ್ಸೆಪ್ಟಿಬಿಲಿಟಿ ಮ್ಯಾಪ್ ಪ್ರಕಾರ, ಪಶ್ಚಿಮಘಟ್ಟದುದ್ದಕ್ಕೂ ಭೂಕುಸಿತದ ಸಾಧ್ಯತೆ ಅತ್ಯಂತ ತೀವ್ರ ಮಟ್ಟ ಮುಟ್ಟಿದೆ. ಇನ್ನೊಂದು ವಿಚಾರವೇನೆಂದರೆ, ಕಸ್ತೂರಿರಂಗನ್ ವರದಿ ಜಾರಿಯಾಗಿ ಪರಿಸರ ಸೂಕ್ಷ್ಮ ಪ್ರದೇಶವು ಕೇಂದ್ರದ ಸುಪರ್ದಿಗೆ ಒಳಪಟ್ಟಿತೆಂದೇ ಇಟ್ಟುಕೊಳ್ಳೋಣ. ಅದರಿಂದ ಈ ಪ್ರದೇಶವನ್ನೇ ನಂಬಿ ಬದುಕುತ್ತಿದ್ದವರೆಲ್ಲ ನೆಲೆ ಕಳೆದುಕೊಂಡರೆ ಆ ಬಳಿಕವೂ ಪಶ್ಚಿಮ ಘಟ್ಟಗಳ ರಕ್ಷಣೆ ಕೇಂದ್ರ ಸರಕಾರದಿಂದ ಆಗುತ್ತದೆಯೇ ಎಂಬ ಪ್ರಶ್ನೆಯೊಂದು ಕಾಡದೇ ಇರದು. ಯಾಕೆಂದರೆ ಪರಿಸರ ರಕ್ಷಣೆ ವಿಚಾರ ದಲ್ಲಿ ಪರಿಸರ ಸ್ನೇಹಿ ಮಾರ್ಗವೇ ಮುಖ್ಯವಾದದ್ದು ಕುದುರೆಮುಖ ಯೋಜನೆಯೊಂದರಲ್ಲಿ ಮಾತ್ರವೇ ಇರಬೇಕು. ಉಳಿದಂತೆ ಮುಖ್ಯ ವಾಗುವುದು ಡಾಲರ್ ಸ್ನೇಹಿ ಮಾರ್ಗವೇ. ಗೋವಾದ ಮೋಪಾ ಪ್ರಸ್ಥಭೂಮಿಯಲ್ಲಿ ಎರಡನೇ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕ್ಯಾಸಿನೋ ಸಂಕೀರ್ಣ ನಿರ್ಮಾಣಕ್ಕಾಗಿ ಅದು ಜೈವಿಕ ವೈವಿಧ್ಯದ ಪ್ರದೇಶ ಎಂಬುದನ್ನೇ ಮರೆಮಾಚಲಾಯಿತು. ಜೈವಿಕ ವೈವಿಧ್ಯದ ಹಾಟ್ ಸ್ಪಾಟ್ ಮನರಂಜನೆಯ ಹಾಟ್ ಸ್ಪಾಟ್ ಆಗಿಹೋಯಿತು. ಹೀಗೆ ಅಭಿವೃದ್ಧಿಯ ಮತ್ತು ದುಡ್ಡಿನ ಗೀಳಿಗೆ ಬಿದ್ದ ಸರಕಾರಗಳಿಂದ ಪರಿಸರ ಸಂರಕ್ಷಣೆ ಎಂಬುದು ಆಗುವ ಕೆಲಸವೇ ಎಂಬ ಅನುಮಾನ ಕಾಡದೇ ಇರುವುದಿಲ್ಲ. ಆರಂಭದಲ್ಲಿಯೇ ಹೇಳಿದ ಹಾಗೆ, ಸಹ್ಯಾದ್ರಿಯೊಡಲ ಮೂಕ ವೇದನೆ ಮತ್ತದರ ವಿಕೋಪದ ಪರಿಣಾಮಗಳು ಒಂದೆಡೆಯಾದರೆ, ಪಶ್ಚಿಮಘಟ್ಟದ ಮಡಿಲ ಬದುಕುಗಳದ್ದು ಇನ್ನೊಂದು ಬಗೆಯ ಸಂಕಟ. ಇವೆರಡನ್ನೂ ಸಮತೂಗಿಸಬಲ್ಲ ಸೂತ್ರವೊಂದನ್ನು ನಾವು ಬಹುಶಃ ಪೂರ್ತಿಯಾಗಿ ಈಗಾಗಲೇ ಕಳೆದುಕೊಂಡಿದ್ದೇವೆ. ಮುಂದೇನು ಎಂಬ ಪ್ರಶ್ನೆ, ಆತಂಕ, ಆಕ್ರೋಶ, ಪ್ರತಿಭಟನೆಗಳ ಆಚೆಗೂ ಉಳಿಯು ವಂಥದ್ದೇ ಆಗಿದೆ.







