ದೇಶದ ಬಡವರು ಕನಸು ಕಾಣಬಹುದು, ಅವುಗಳನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ನನ್ನ ಚುನಾವಣೆ ಸಾಕ್ಷಿ: ದ್ರೌಪದಿ ಮುರ್ಮು

Photo:PTI
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಮುಖ್ಯಸ್ಥರಾಗಿ ಸೋಮವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ರಾಷ್ಟ್ರಪತಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಮುರ್ಮು, "ದೇಶದ ಬಡವರು ಕನಸುಗಳನ್ನು ಕಾಣಬಹುದು ಹಾಗೂ ಅವುಗಳನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ನನ್ನ ಚುನಾವಣೆ ಸಾಕ್ಷಿಯಾಗಿದೆ" ಎಂದು ಹೇಳಿದರು.
"ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದು ನನ್ನ ಕನಸಾಗಿತ್ತು. ನಾನು ಯುವಕರಿಗೆ ಹೇಳಲು ಬಯಸುತ್ತೇನೆ ಕೇವಲ ನಿಮ್ಮ ಭವಿಷ್ಯದತ್ತ ಗಮನಹರಿಸಬೇಡಿ. ಆದರೆ ದೇಶದ ಭವಿಷ್ಯದ ಅಡಿಪಾಯವನ್ನು ಹಾಕಿರಿ. ರಾಷ್ಟ್ರಪತಿಯಾಗಿ ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ''ಎಂದರು.
"ನಾನು ಕಡೆಗಣಿಸಲ್ಪಟ್ಟಿರುವವರ ಕಲ್ಯಾಣಕ್ಕೆ ಒತ್ತು ನೀಡುತ್ತೇನೆ. ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಹೊಸ ಕಂತುಗಳನ್ನು ಸೇರಿಸುತ್ತಿದೆ... ಕೋವಿಡ್ ಸಾಂಕ್ರಾಮಿಕದ ವಿರುದ್ಧ ಭಾರತದ ಹೋರಾಟವು ತನ್ನ ಜಾಗತಿಕ ಪ್ರಭಾವವನ್ನು ಹೆಚ್ಚಿಸಿದೆ’’ ಎಂದರು.
ಮೊದಲ ಟ್ವೀಟ್ ನಲ್ಲಿ "ಜೋಹರ್, ನಮಸ್ಕಾರ್'' ಎಂದ ಮುರ್ಮು
ಅಧ್ಯಕ್ಷರಾಗಿ ತನ್ನ ಮೊದಲ ಟ್ವೀಟ್ನಲ್ಲಿ, ದ್ರೌಪದಿ ಮುರ್ಮು ಅವರು ದೇಶವನ್ನು "ಜೋಹರ್, ನಮಸ್ಕಾರ್" ಎಂದು ಅಭಿನಂದಿಸಿದರು ಹಾಗೂ ಭಾರತೀಯರ ಆಶಯಗಳು ಉನ್ನತ ಹುದ್ದೆಯಲ್ಲಿ ತನ್ನ ಕರ್ತವ್ಯಗಳನ್ನು ಪೂರೈಸಲು ಶಕ್ತಿಯನ್ನು ನೀಡುತ್ತವೆ ಎಂದು ಹೇಳಿದರು.
"ಜೋಹರ್" ಎಂಬುದು ಆದಿವಾಸಿಗಳ ಸಾಂಪ್ರದಾಯಿಕ ಶುಭಾಶಯವಾಗಿದೆ.







