ಚುನಾವಣಾ ಆಯೋಗದ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ ಉದ್ಧವ್ ಠಾಕ್ರೆ ಬಣ

Photo:PTI
ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರವನ್ನು ಕೈಗೊಳ್ಳುವವರೆಗೆ ಪಕ್ಷದ ಮೇಲೆ ಠಾಕ್ರೆ ಅಥವಾ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪೈಕಿ ಯಾರ ನಿಯಂತ್ರಣವಿದೆ ಎಂದು ಚುನಾವಣಾ ಆಯೋಗ ನಿರ್ಧರಿಸುವುದನ್ನು ತಡೆಯಬೇಕೆಂದು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣವು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಬಿಜೆಪಿಯ ಬೆಂಬಲದೊಂದಿಗೆ ಸರಕಾರ ರಚಿಸಿದ ನಂತರ ಶಿಂಧೆ ತಂಡ ನಮ್ಮದೇ "ನಿಜವಾದ ಶಿವಸೇನೆ" ಎಂದು ಹೇಳಿಕೊಂಡಿದೆ.
ಮಹಾರಾಷ್ಟ್ರದ ಶಿವಸೇನೆ ಪಕ್ಷವನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಸಾಬೀತುಪಡಿಸಲು ಆಗಸ್ಟ್ 8 ರೊಳಗೆ ಪುರಾವೆಗಳ ಸಾಕ್ಷ್ಯ ಹಾಗೂ ಲಿಖಿತ ಹೇಳಿಕೆಗಳನ್ನು ನೀಡುವಂತೆ ಚುನಾವಣಾ ಆಯೋಗವು ಎರಡೂ ಶಿವಸೇನಾ ಗುಂಪುಗಳಿಗೆ ತಿಳಿಸಿದೆ. ಆ ಬಳಿಕವಷ್ಟೇ ಚುನಾವಣಾ ಆಯೋಗ ಪ್ರಕರಣದ ವಿಚಾರಣೆ ನಡೆಸಲಿದೆ.
ಕಳೆದ ತಿಂಗಳು ರಾಜಕೀಯ ಕಾರ್ಯಾಚರಣೆಯಲ್ಲಿ ಗುಜರಾತ್ನಿಂದ ಅಸ್ಸಾಂಗೆ, ಅಸ್ಸಾಂನಿಂದ ಗೋವಾಕ್ಕೆ ಬಂದ ಬಂಡಾಯ ಶಾಸಕರ ಅನರ್ಹತೆಯ ಬಗ್ಗೆ ಸ್ಪಷ್ಟತೆ ಬರುವವರೆಗೆ ಶಿವಸೇನೆಯನ್ನು ಯಾವ ಗುಂಪು ಪ್ರತಿನಿಧಿಸುತ್ತದೆ ಎಂಬುದನ್ನು ಚುನಾವಣಾ ಆಯೋಗವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಟೀಮ್ ಠಾಕ್ರೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.







