ಗಂಡು, ಹೆಣ್ಣಿಗೆ ಪ್ರತ್ಯೇಕ ಶಾಲೆಗಳನ್ನು ನಡೆಸುವಂತಿಲ್ಲ: ಕೇರಳ ಸರಕಾರಕ್ಕೆ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಆದೇಶ

Photo:facebook
ಕೊಚ್ಚಿ: ಮಹತ್ವದ ಆದೇಶದಲ್ಲಿ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 2023-24ರ ಶೈಕ್ಷಣಿಕ ವರ್ಷದಿಂದ ದಕ್ಷಿಣ ರಾಜ್ಯದಲ್ಲಿ ಸಹ-ಶಿಕ್ಷಣ ಸಂಸ್ಥೆಗಳು ಮಾತ್ರ ಇರಬೇಕು, ಹೆಣ್ಣು ಮಕ್ಕಳಿಗೆ ಬೇರೆ, ಗಂಡುಮಕ್ಕಳಿಗೆ ಬೇರೆಯೆಂಬಂತೆ ಪ್ರತ್ಯೇಕ ಶಾಲೆಗಳು ಇರಬಾರದು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಒಬ್ಬ ವ್ಯಕ್ತಿ ಸಲ್ಲಿಸಿದ ಮನವಿಯನ್ನು ಆಧರಿಸಿ, ಸಮಿತಿಯು ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸಲು ಪ್ರಧಾನ ಕಾರ್ಯದರ್ಶಿ (ಸಾಮಾನ್ಯ ಶಿಕ್ಷಣ) ಹಾಗೂ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಮತ್ತು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (ಎಸ್ಸಿಇಆರ್ಟಿ) ಆದೇಶಿಸಿದೆ.
ಆದೇಶದ ಪ್ರಕಾರ ಸಹಶಿಕ್ಷಣ ಪದ್ಧತಿ ಜಾರಿ ಕುರಿತು 90 ದಿನಗಳೊಳಗೆ ಆಯೋಗಕ್ಕೆ ವಿವರವಾದ ವರದಿ ಸಲ್ಲಿಸಬೇಕು.
ಇಂತಹ ಶಾಲೆಗಳಲ್ಲಿ ಸಹಶಿಕ್ಷಣ ಪದ್ಧತಿ ಜಾರಿ ಜೊತೆಗೆ ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಸುಧಾರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ, ಸಹಶಿಕ್ಷಣದ ಅಗತ್ಯತೆಯ ಬಗ್ಗೆ ಪೋಷಕರಿಗೆ ಅರಿವು ನೀಡಬೇಕು.
ಅಂಕಿ ಅಂಶಗಳ ಪ್ರಕಾರ ಕೇರಳದಲ್ಲಿ ಸರಕಾರಿ ಮತ್ತು ಅನುದಾನಿತ ವಲಯಗಳಲ್ಲಿ ಒಟ್ಟು 280 ಬಾಲಕಿಯರ ಶಾಲೆಗಳು ಹಾಗೂ 164 ಬಾಲಕರ ಶಾಲೆಗಳಿವೆ.







