ವೇಶ್ಯಾವಾಟಿಕೆ ಆರೋಪದಲ್ಲಿ ಬಿಜೆಪಿ ನಾಯಕನ ಫಾರ್ಮ್‍ಹೌಸ್ ಮೇಲೆ ದಾಳಿ ನಂತರ ಮೇಘಾಲಯ ಆಡಳಿತದಲ್ಲಿ ಒಡಕು

ಹೊಸದಿಲ್ಲಿ: ಮೇಘಾಲಯದ ತುರಾ ಎಂಬಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬರ್ನಾರ್ಡ್ ಆರ್ ಮರಕ್ ಅವರ ಒಡೆತನದ ಫಾರ್ಮ್ ಹೌಸ್ ಗೆ ಪೊಲೀಸರು ನಡೆಸಿದ ದಾಳಿಯು ಬಿಜೆಪಿಯು ಭಾಗವಾಗಿರುವ ರಾಜ್ಯದ ಆಡಳಿತ ಮೈತ್ರಿಕೂಟವಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ ನೇತೃತ್ವದ ಮೇಘಾಲಯ ಡೆಮಾಕ್ರೆಟಿಕ್ ಅಲಾಯನ್ಸ್‍ನಲ್ಲಿ ಬಿರುಕು ಮೂಡಿಸಿದೆ.
ಬಿಜೆಪಿ ನಾಯಕನ ಫಾರ್ಮ್ ಹೌಸ್ ಅನ್ನು ವೇಶ್ಯಾವಾಟಿಕೆಗೆ ಬಳಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಫಾರ್ಮ್ ಹೌಸ್‍ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಫೆಬ್ರವರಿಯಲ್ಲಿ ದಾಖಲಾದ ದೂರಿನ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಮಾರಕ್ ಅವರ ಫಾರ್ಮ್ ಹೌಸ್‍ನಲ್ಲಿ 23 ಮಂದಿ ಮಹಿಳೆಯರು ಸೇರಿದಂತೆ 73 ಮಂದಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಈಗಾಗಲೇ ತಿಳಿಸಿದ್ದಾರೆ.
ದಾಳಿ ನಂತರ ಮಾರಕ್ ವಿರುದ್ಧ ಅನೈತಿಕ ಚಟುವಟಿಕೆ ನಿಯಂತ್ರಣ ಕಾಯಿದೆ 1956 ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತಾದರೂ ತಮಗೆ ಸೇರಿದ ಫಾರ್ಮ್‍ಹೌಸ್‍ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಮಾರಕ್ ಹೇಳಿದ್ದಾರೆ,
ಪ್ರಸ್ತುತ ಗರೊ ಟ್ರೈಬಲ್ ಆಟೊನೋಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್‍ನ ಚುನಾಯಿತ ಸದಸ್ಯನಾಗಿರುವ ಮಾರಕ್ ಅವರು ಪ್ರತ್ಯೇಕ ಗರೋ ರಾಜ್ಯಕ್ಕಾಗಿ ಹೋರಾಡುತ್ತಿದ್ದ ಹಾಗೂ ಈಗ ವಿಸರ್ಜಿಸಲ್ಪಟ್ಟಿರುವ ತೀವ್ರಗಾಮಿ ಸಂಘಟನೆ ಅಚಿಕ್ ನ್ಯಾಷನಲಿಸ್ಟ್ ವಾಲಂಟಿಯರ್ ಕೌನ್ಸಿಲ್ ಇದರ ಮಾಜಿ ಸದಸ್ಯರಾಗಿದ್ದಾರೆ.
ಅವರ ಫಾರ್ಮ್‍ಹೌಸ್ ಮೇಲೆ ದಾಳಿ ವೇಳೆ ಅಕ್ರಮ ಮದ್ಯ, 500 ಪ್ಯಾಕೆಟ್ ಕಾಂಡೊಂಗಳು, ಗರ್ಭನಿರೋಧಕ ಗುಳಿಗೆಗಳು ಮತ್ತಿತರ ವಸ್ತುಗಳು ದೊರಕಿವೆ ಎಂದು ಪೊಲೀಸರು ಹೇಳಿದ್ದರಲ್ಲದೆ ನಾಲ್ಕು ಮಂದಿ ಬಾಲಕರು ಹಾಗೂ ಒಬ್ಬ ಬಾಲಕಿಯನ್ನು ಕೊಳಕು ತುಂಬಿದ ಕೊಠಡಿಗಳಲ್ಲಿ ಇರಿಸಲಾಗಿತ್ತು ಹಾಗೂ ಅವರು ಆಘಾತದಲ್ಲಿದ್ದರು, ಕೆಲವರು ಆ ಕಟ್ಟಡದಲ್ಲಿ ಬಹಿರಂಗವಾಗಿ ಮದ್ಯ ಸೇವಿಸುತ್ತಿದ್ದರೆ ಇನ್ನು ಕೆಲವರು ಮೈ ಮೇಲೆ ಯಾವುದೇ ಬಟ್ಟೆಯಿಲ್ಲದೆ ಅಥವಾ ಕನಿಷ್ಠ ಬಟ್ಟೆಯಲ್ಲಿ ವಾಹನಗಳೊಳಗೆ ಕುಳಿತುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಾರಕ್ ನ ವಿರುದ್ಧ 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ, ಆತನ ಹಿಂದಿನ ಸಂಘಟನೆಯನ್ನು ವಿಸರ್ಜಿಸಲಾಗಿದ್ದರೂ ಆತ ಕ್ರಿಮಿನಲ್ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಹೇಳಿಕೆ ಬಿಡುಗಡೆಗೊಳಿಸಿದ ಮಾರಕ್ ತನ್ನ ಜೀವಕ್ಕೆ ಬೆದರಿಕೆಯಿದೆ ಹಾಗೂ ತಾವು ಬಂಧನದಿಂದ ತಪ್ಪಿಸಿಕೊಳ್ಳುತ್ತಿಲ್ಲ ತಮ್ಮ ಫಾರ್ಮ್‍ಹೌಸ್‍ನಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ ಎಂದಿದ್ದಾನೆ.
ಮಾರಕ್ ಬೆಂಬಲಕ್ಕೆ ಬಿಜೆಪಿ ನಿಂತಿದ್ದು ಅವರು ರಾಜಕೀಯ ದ್ವೇಷದ ಬಲಿಪಶುವಾಗಿದ್ದಾರೆ, ಅವರ ಫಾರ್ಮ್ ಹೌಸ್‍ನಲ್ಲಿ ಗೌರವಾನ್ವಿತ ಕುಟುಂಬಗಳ ಅತಿಥಿಗಳಿದ್ದು ಅದನ್ನು ವೇಶ್ಯಾಗೃಹ ಎಂದು ಬಣ್ಣಿಸುವುದು ಅಸ್ವೀಕರಾರ್ಹ ಎಂದು ಹೇಳಿದೆ.
ಮೇ ತಿಂಗಳಲ್ಲಿ ಮಾರಕ್ ಅವರು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮ ಮತ್ತು ಸಂಸದೆಯಾಗಿರುವ ಅವರ ಸಹೋದರಿ ಅಗತಾ ಸಂಗ್ಮಾ ಅವರ ವಿರುದ್ಧ ಹಣ ದುರುಪಯೋಗದ ಆರೋಪ ಹೊರಿಸಿದ್ದರು.







