ಬೆಲೆ ಏರಿಕೆಯೇ ಮೋದಿ ಸರಕಾರದ ಕೊಡುಗೆ: ಬಿ.ಎಂ.ಭಟ್

ಬೆಳ್ತಂಗಡಿ, ಜು.25: ಜನರ ನೋವನ್ನು ಅರ್ಥ ಮಾಡಿಕೊಳ್ಳದವರು ಆಡಳಿತ ನಡೆಸಲು ಅಸಮರ್ಥರು. ದಿನ ಬೆಳಗಾದರೆ ಅಗತ್ಯ ವಸ್ತುಗಳ ಬೆಲೆಗಳನ್ನು ನಿರಂತರ ಏರಿಸುವ ಬಿಜೆಪಿ ಸರಕಾರದ ನಡೆಯಿಂದ ಸರಕಾರದ ವೈಫಲ್ಯ ಸಾಬೀತಾಗಿದೆ ಎಂದು ಕಾರ್ಮಿಕ ಮುಖಂಡ ಬಿ.ಎಂ ಭಟ್ ಹೇಳಿದ್ದಾರೆ.
ಅವರು ಸೋಮವಾರ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘ (ಸಿಐಟಿಯು) ನೇತೃತ್ವದಲ್ಲಿ ಬೆಲೆಯೇರಿಕೆ ವಿರೋದಿಸಿ ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು.
ಅಗತ್ಯ ವಸ್ತುಗಳ ದರ ವಿಪರೀತ ಏರುತ್ತಿರುವುದರಿಂದ ಕಂಗಾಲಾದ ಜನತೆಗೆ ಆಹಾರ ವಸ್ತುಗಳಿಗೂ ಜಿ.ಎಸ್.ಟಿ. ವಿಧಿಸಿ ಜನರ ಬದುಕಿನ ಹಕ್ಕನ್ನೇ ಕಸಿಯುವ ಮೋದಿ ಸರಕಾರವನ್ನು ಕಿತ್ತೆಸೆಯುವುದೊಂದೇ ಉಳಿದಿರುವ ಏಕೈಕ ದಾರಿ ಎಂದು ಬಿ.ಎಂ.ಭಟ್ ಹೇಳಿದರು.
ಹೋರಾಟಕ್ಕೆ ಬೆಂಬಲ ಸೂಚಿಸಿ ಭಾಗವಹಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮಾತನಾಡಿ, ಬೆಲೆ ಏರಿಸಿ ಜನರ ರಕ್ತ ಹೀರುವ ಬಿಜೆಪಿ ಸರಕಾರ ದೇಶದ ಪ್ರಜೆಗಳ ತಲೆ ಮೇಲೆ ಸುಮಾರು 50 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಸಾಲ ಮಾಡಿ ಒಟ್ಟು ದೇಶದ ಸಾಲವನ್ನು 107 ಲಕ್ಷ ಕೋಟಿ ರೂ.ಗೆ ಏರಿಸಿದೆ ಎಂದರು.
ದೇಶದ ಸೊತ್ತನ್ನೆಲ್ಲಾ ಮಾರಿ ತಿಂದು ಮುಗಿಸುತ್ತಿರುವ ಇವರು ಇನ್ನು ದೇಶದ ಪ್ರಜೆಗಳನ್ನಷ್ಟೇ ಮಾರಾಟ ಮಾಡಲು ಬಾಕಿ ಎಂದರು.
ಪ್ರತಿಭಟನೆಯಲ್ಲಿ ಕಮ್ಯೂನಿಸ್ಟ್ ಮುಖಂಡರುಗಳಾದ ಜಯರಾಮ ಮಯ್ಯ, ನಬಿಸಾ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿಯ ಸದಸ್ಯರಾದ ಕಿರಣಪ್ರಭಾ, ಕಾರ್ಮಿಕ ಮುಖಂಡರುಗಳಾದ ರಾಮಚಂದ್ರ, ಚಂದ್ರಶೇಖರ ಭಟ್, ಸುಜಾತಾ, ಭವ್ಯಾ, ಅಶ್ವಿತಾ, ಶ್ರೀನಿವಾಸ್ ಲಾಯಿಲ ಮೊದಲಾದವರು ಭಾಗವಹಿಸಿದ್ದರು.
ಜಯಶ್ರೀ ಸ್ವಾಗತಿಸಿದರು. ಲೋಕೇಶ್ ಕುದ್ಯಾಡಿ ವಂದಿಸಿದರು.







