ಮೋದಿ, ಆದಿತ್ಯನಾಥ್ ಕುಟುಂಬ ಇಲ್ಲದ ನಾಯಕರು...: ಕುಟುಂಬ ರಾಜಕಾರಣದ ಕುರಿತು ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ

ವಿಜಯಪುರ, ಜು. 25: ‘ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುಟುಂಬ ಇಲ್ಲದ ನಾಯಕರು. ಆದರೆ, ನಮಗೆಲ್ಲ ಕುಟುಂಬವಿದ್ದು, ಕುಟುಂಬ ರಾಜಕಾರಣ ಇದ್ದೇ ಇರುತ್ತದೆ' ಎಂದು ಆಹಾರ ಸಚಿವ ಉಮೇಶ್ ಕತ್ತಿ, ಕುಟುಂಬ ರಾಜಕಾರಣವನ್ನು ಸಮರ್ಥಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,‘ನಾವೆಲ್ಲರೂ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು. ನಾನೂ ರಾಜಕೀಯದಲ್ಲಿ ಇದ್ದೇನೆ. ಬಿ.ಎಸ್.ಯಡಿಯೂರಪ್ಪನವರು ರಾಜಕಾರಣದಲ್ಲಿದ್ದು, ಇದೀಗಅವರ ಪುತ್ರ ಬಿ.ವೈ.ವಿಜಯೇಂದ್ರ ರಾಜಕಾರಣದಲ್ಲಿದ್ದಾರೆ, ಇದರಲ್ಲಿ ತಪ್ಪೇನಿದೆ' ಎಂದು ಪ್ರಶ್ನಿಸಿದರು.
‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 80 ವರ್ಷ ವಯಸ್ಸಾಗಿದೆ. ಆದರೆ, ಅವರಲ್ಲಿ ಈಗಲೂ ದುಡಿಯುವ ತಾಕತ್ತು, ಹಂಬಲ ಇದೆ. ಆದರೂ, ಪಕ್ಷದ ನಿಯಮಾನುಸಾರ ಬಿಎಸ್‍ವೈ ಅವರು ನಿವೃತ್ತಿ ಘೋಷಿಸಿದ್ದು, ಪುತ್ರನಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ನಿರ್ಧರಿಸಿದ್ದಾರೆ' ಎಂದು ಉಮೇಶ್ ಕತ್ತಿ ತಿಳಿಸಿದರು.
‘2023ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಆ ಪಕ್ಷದಲ್ಲಿ‘ನಾನೇ ಮುಖ್ಯಮಂತ್ರಿ.. ನಾನು ಮುಖ್ಯಮಂತ್ರಿ ಎಂದು ಆ ಪಕ್ಷದ ಮುಖಂಡರು ತಮ್ಮ ಚಟ ತೀರಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಯಾರೂ ಬೇಕಾದರೂ ಮುಖ್ಯಮಂತ್ರಿ ಆಗಬಹುದು. ನನಗೂ ಮುಖ್ಯಮಂತ್ರಿ ಆಗಬೇಕೆಂಬ ಹಂಬಲವಿದೆ' ಎಂದು ಉಮೇಶ್ ಕತ್ತಿ ತಮ್ಮ ಬಯಕೆಯನ್ನು ಬಹಿರಂಗಪಡಿಸಿದರು.







