ಲಾಸ್ಟ್ ಬಾಲ್ ಸಿಕ್ಸ್ ಹೊಡಿಯಲೇಬೇಕೆಂಬ ಅನಿವಾರ್ಯದಲ್ಲಿ ಸಿದ್ದರಾಮಯ್ಯ: ಸಚಿವ ಅಶೋಕ್ ಲೇವಡಿ
2023ರ ವಿಧಾನಸಭೆ ಚುನಾವಣೆ

ಬೆಂಗಳೂರು, ಜು. 25: ‘ವಿಪಕ್ಷ ನಾಯಕ ಸಿದ್ದರಾಮಯ್ಯನವರು ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಕ್ರಿಕೆಟ್ ಆಟದಲ್ಲಿರುವಂತೆ ‘ಲಾಸ್ಟ್ ಬಾಲ್ ಸಿಕ್ಸ್ ಹೊಡಿಯಲೇಬೇಕು' ಎಂಬ ಅನಿವಾರ್ಯತೆ ಸಿಲುಕಿರುವ ಅವರು, ಏನೇನೋ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಒಳ ಜಗಳದಿಂದಲೇ ಆ ಪಕ್ಷ ಪತನ ಆಗುತ್ತಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಾತಿಗೊಬ್ಬ ಮುಖ್ಯಮಂತ್ರಿಯನ್ನು ಮಾಡಲು ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯದ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಿಂದಲೇ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ' ಎಂದು ತಿಳಿಸಿದರು.
‘ಕಾಂಗ್ರೆಸ್ ಪಕ್ಷದಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ಆ ಪಕ್ಷದಲ್ಲಿ ಹೈಕಮಾಂಡ್ ಅದೇ ಸ್ಥಿತಿಯಲ್ಲಿದೆ. ಪ್ರತಿಪಕ್ಷ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಆ ಪಕ್ಷದ ಮುಖಂಡರ ಜಗಳ ಬೀದಿ ರಂಪ ಆಗಿದೆ. ಮನೆಯೊಳಗೆ ತೀರ್ಮಾನ ಆಗಬೇಕಿರುವ ವಿಚಾರ ಬೀದಿಗೆ ಬಂದಿದೆ. ಹೈಕಮಾಂಡ್ ಇದೆಯೋ, ಇಲ್ಲವೋ? ತಿಳಿಯದು' ಎಂದು ಅಶೋಕ್ ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್‍ನ ಒಬ್ಬಶಾಸಕ ಕೆಪಿಸಿಸಿ ಅಧ್ಯಕ್ಷರಿಗೆ ಸವಾಲ್‍ಹಾಕಿದ್ದಾರೆ. ಮತ್ತೆ ನಾನು ಹೀಗೆ ಮಾತನಾಡುತ್ತೇನೆ ಎಂದು ಚಾಮರಾಜಪೇಟೆ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಹೇಳಿದ್ದಾರೆ. ಅವರ ಹಿಂದೆ ‘ದೊಡ್ಡವರು' ಇದ್ದಾರೆ. ಹೀಗಾಗಿಯೇ ಅವರು ಸೇರಿಗೆ ಸವ್ವಾ ಸೇರು ಎಂಬ ದಾಟಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದರು.
‘ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಜಾತಿ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ರಾಷ್ಟ್ರಕವಿ ಕುವೆಂಪು, ನಾಡಪ್ರಭು ಕೆಂಪೇಗೌಡ ಎಂದೂ ಜಾತಿಯನ್ನು ನೋಡಲಿಲ್ಲ. ಹೀಗಾಗಿ ಬೆಂಗಳೂರು ಅಭಿವೃದ್ಧಿ ಸಾಧ್ಯವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಜನರೇ ಆಯ್ಕೆ ಮಾಡಲಿದ್ದಾರೆ'ಎಂದು ಅಶೋಕ್ ತಮ್ಮದೆ ದಾಟಿಯಲ್ಲಿ ತಿಳಿಸಿದರು.







