ಬಿಜೆಪಿಯ ರಾಜಕೀಯ ಅಜೆಂಡಾ ಈಡೇರಿಸಿದ್ದೇ ಸಾಧನೆ: ಮಾಜಿ ರಾಷ್ಟ್ರಪತಿ ಕೋವಿಂದ್ ಕುರಿತು ಮೆಹಬೂಬ ಮುಫ್ತಿ

ಹೊಸದಿಲ್ಲಿ,ಜು.25: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ವಿರುದ್ಧ ಸೋಮವಾರ ದಾಳಿಯನ್ನು ನಡೆಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರು,ಅವರು ಸಂವಿಧಾನವನ್ನು ‘ಹಲವಾರು ಬಾರಿ ತುಳಿದಿರುವ ’ಪರಂಪರೆಯನ್ನು ಹಿಂದೆ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ. ಕೋವಿಂದ್ ಬಿಜೆಪಿಯ ರಾಜಕೀಯ ಅಜೆಂಡಾಕ್ಕಾಗಿ ಕೆಲಸ ಮಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ದ್ರೌಪದಿ ಮುರ್ಮು ಅವರು ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕೋವಿಂದ್ ವಿರುದ್ಧ ಟ್ವಟರ್ ಅಸ್ತ್ರವನ್ನು ಪ್ರಯೋಗಿಸಿರುವ ಮುಫ್ತಿ, ‘ಮಾಜಿ ರಾಷ್ಟ್ರಪತಿಗಳು ಭಾರತೀಯ ಸಂವಿಧಾನವನ್ನು ಹಲವಾರು ಸಲ ತುಳಿದಿರುವ ಪರಂಪರೆಯನ್ನು ಹಿಂದೆ ಬಿಟ್ಟು ಹೋಗಿದ್ದಾರೆ. ಅದು ವಿಧಿ 370ರ ರದ್ದತಿ,ಸಿಎಎ ಅಥವಾ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ನಿರ್ಲಜ್ಜ ದಾಳಿಯಾಗಿರಲಿ,ಅವರು ಭಾರತೀಯ ಸಂವಿಧಾನವನ್ನು ಬಲಿಯಾಗಿಸಿ ಬಿಜೆಪಿಯ ರಾಜಕೀಯ ಅಜೆಂಡಾವನ್ನು ಈಡೇರಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಮುಫ್ತಿ ಟೀಕೆಗಳನ್ನು ತಳ್ಳಿಹಾಕಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು,‘ಪ್ರತಿಯೊಬ್ಬರ ತಪ್ಪು ಹೇಳಿಕೆಗಳಿಗೂ ನಾವು ಮಹತ್ವವನ್ನು ನೀಡಬಾರದು ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ್ದ ಕೇಂದ್ರ ಸರಕಾರದ ಕ್ರಮವನ್ನು ಮುಫ್ತಿಯವರ ಟ್ವೀಟ್ ಪ್ರಸ್ತಾಪಿಸಿದೆ.





