ಆಸ್ತಿ ನೋಂದಣಿ; ಶೇ.10ರ ರಿಯಾಯಿತಿ ಇನ್ನೂ 3 ತಿಂಗಳ ಅವಧಿಗೆ ವಿಸ್ತರಣೆ: ಸಚಿವ ಅಶೋಕ್

ಬೆಂಗಳೂರು, ಜು. 25: ‘ರಾಜ್ಯದಲ್ಲಿ ಮನೆ, ನಿವೇಶನ ಸಹಿತ ಆಸ್ತಿ ನೋಂದಣಿಗೆ ರಾಜ್ಯ ಸರಕಾರ ನೀಡಿದ್ದ ಶೇ.10ರಷ್ಟು ರಿಯಾಯಿತಿಯನ್ನು ಇನ್ನೂ ಮೂರು ತಿಂಗಳ ಅವಧಿಗೆ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರಕಾರ ನೀಡಿದ್ದ ಶೇ.10ರ ರಿಯಾಯಿತಿಯಿಂದ ಸರಕಾರದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿದ್ದು, ನಮ್ಮ ನಿರೀಕ್ಷೆಗೂ ಮೀರಿ ಆದಾಯ ಸಂಗ್ರಹವಾಗುತ್ತಿದೆ' ಎಂದು ಮಾಹಿತಿ ನೀಡಿದರು.
‘ಆಸ್ತಿ ನೋಂದಣಿಯ ಮೂಲಕ 14ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಕಂದಾಯ ಇಲಾಖೆಗೆ ಗುರಿ ನೀಡಲಾಗಿದೆ. ಆದರೆ, ಈ ಪ್ರಮಾಣವನ್ನು ನಾವು ಅಧಿಕಾರಿಗಳ ಜತೆ ಚರ್ಚಿಸಿ 15 ಸಾವಿರ ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಆಸ್ತಿ ನೋಂದಣಿಯಿಂದ 5 ಸಾವಿರ ಕೋಟಿ ರೂ.ಗಳಷ್ಟು ಆದಾಯ ಸಂಗ್ರಹಿಸಲಾಗಿದೆ' ಎಂದು ವಿವರಿಸಿದರು.
ಸರ್ವರ್ ಸಮಸ್ಯೆಗೆ ಪರಿಹಾರ: ‘ನೋಂದಣಿ ಕಚೇರಿಗಳಲ್ಲಿನ ಸರ್ವರ್ ಸಮಸ್ಯೆಗೆ ಸಂಬಂಧಪಟ್ಟಂತೆ ಹಲವು ದೂರುಗಳಿದ್ದು, ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಕಲ್ಪಿಸಲು ತೀರ್ಮಾನಿಸಲಾಗಿದೆ. 406 ಕೋಟಿ ರೂ.ವೆಚ್ಚದಲ್ಲಿ ನೋಂದಣಿ ಕಚೇರಿಗಳನ್ನು ಕಂಪ್ಯೂಟರಿಕರಣಗೊಳಿಸಲು ನಿರ್ಧರಿಸಲಾಗಿದೆ' ಎಂದು ಸಚಿವ ಅಶೋಕ್ ಹೇಳಿದರು.
‘ನೋಂದಣಿ ಕಚೇರಿಗಳಲ್ಲಿ ಸರ್ವರ್ ಸರಿಯಿದ್ದರೆ ಆಪರೇಟರ್‍ಗಳಿಲ್ಲ, ಆಪರೇಟರ್ ಇದ್ದರೆ ಸರ್ವರ್ ಸಿಗುವುದಿಲ್ಲ ಎಂಬ ದೂರುಗಳಿವೆ. ಹೀಗಾಗಿ ಈಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಒಂದೇ ಕಂಪೆನಿಯ ಆಪರೇಟರ್ ಮತ್ತು ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಇದರಿಂದ ಸರಕಾರಕ್ಕೆ ಆಗುತ್ತಿದ್ದ ಹಣಕಾಸಿನ ಹೊರೆಯನ್ನು ತಪ್ಪಲಿದೆ' ಎಂದು ಅವರು ಹೇಳಿದರು.
ಬಿಎಸ್‍ವೈ ವಯಸ್ಸಿನ ಕಾರಣಕ್ಕೆ ಸ್ಪರ್ಧಿಸುವುದಿಲ್ಲ:‘ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಬಿಎಸ್‍ವೈ ಹೇಳಿಕೆ ನೀಡಿದ್ದು, ಅವರು ರಾಜಕೀಯದಲ್ಲಿರುತ್ತಾರೆ. ಆದರೆ, ವಯಸ್ಸಿನ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಅಷ್ಟೇ. ಅವರೇ ಚುನಾವಣೆಯಲ್ಲಿ ಮುಂದೆ ನಿಂತು ಕೆಲಸ ಮಾಡಲಿದ್ದಾರೆ' ಎಂದು ಅಶೋಕ್ ವಿವರಣೆ ನೀಡಿದರು.







