ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಸೂರು ಕಲ್ಪಿಸಲು ಆಗ್ರಹಿಸಿ ಧರಣಿ
ಮಣಿಪಾಲ: ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರಿಗೆ ನಿವೇಶನ/ಖಾಲಿ ಜಾಗ ಮತ್ತು ಮನೆ ಮಂಜೂರು ಮಾಡುವಂತೆ ಆಗ್ರಹಿಸಿ ಕರುನಾಡು ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಯಿತು.
ಮುಖ್ಯವಾಗಿ ಕೂಲಿ ಕೆಲಸ ಮಾಡಿಕೊಂಡು, ಗುಡಿಸಲು, ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿರುವ ಕೂಲಿ ಕಾರ್ಮಿಕರು ಹಲವು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದಾರೆ. ಇವರು ಹಲವಾರು ವರ್ಷಗಳಿಂದ ಸೂರಿಗಾಗಿ ಪ್ರಯತ್ನ ಪಡುತ್ತಿದ್ದರೂ ಯಾವುದೇ ರೀತಿಯ ಪ್ರಯೋಜವಾಗಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಿರಾಶ್ರಿತರ ಪಟ್ಟಿಯಲ್ಲಿರುವವರಿಗೆ ನಿವೇಶನ/ಖಾಲಿ ಜಾಗ ಮತ್ತು ಮನೆ ತಕ್ಷಣ ಮಂಜೂರು ಮಾಡಬೇಕು ಎಂದು ಕರುನಾಡು ಹಿತರಕ್ಷಣಾ ಸಮಿತಿ ಆಗ್ರಹಿಸಿದೆ. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಶಶಿಕುಮಾರ್ ವೈ., ಚೆನ್ನಮ್ಮ ಎನ್. ಪೂಜಾರ್, ಶಂಕ್ರನಾಯ್ಕ್, ಕರೀಂ ಸಾಬ್ ಎಲ್ಲಿಗಾರ್, ಚಂದ್ರಪ್ಪ, ನೀಲಪ್ಪ ಹಂಗರಗಿ, ಸಂಗಪ್ಪ, ಮಲ್ಲಪ್ಪ, ಕುಮಾರನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.