ಮಂಗಳೂರು: ‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು, ಜು.25: ಯುವ ಶಕ್ತಿಗೆ ಧ್ವನಿಯಾಗುವ ಸಲುವಾಗಿ ರಾಜ್ಯ ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮಕ್ಕೆ ಸೋಮವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಬಿಜೆಪಿ ಪಕ್ಷವು ಯುವಕರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಯೇ ಅಧಿಕಾರಕ್ಕೆ ಬಂದಿತ್ತು. ಆದರೆ ಅಧಿಕಾರಕ್ಕೇರಿದ ಬಳಿಕ ಒಂದೇ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ. ಬದಲಾಗಿ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿತ್ತು. ಅದೇ ಬಿಜೆಪಿಯ ಸಾಧನೆಯಾಗಿದೆ. ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ನಿರುದ್ಯೋಗಿಗಳ ಸಮೀಕ್ಷೆ ಮಾಡಲು ಹೊಸ ಆ್ಯಪ್‌ನ್ನು ಅನಾವರಣಗೊಳಿಸಿದ್ದೇವೆ. ಪ್ರತಿಯೊಂದು ಮನೆಗೆ ತೆರಳಿ ಯುವ ಸಮೂಹದ ಸಮೀಕ್ಷೆ ಮಾಡುವಂತಹ ಕಾರ್ಯಕ್ರಮವನ್ನು ಯುವ ಕಾಂಗ್ರೆಸ್ ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೊ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ಆಶಿತ್ ಪಿರೇರಾ, ಸರ್ಫರಾಝ್ ನವಾಝ್, ನಾಸೀರ್ ಸಾಮಾಣಿಗೆ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಗಿರೀಶ್ ಆಳ್ವ, ಅಭಿಷೇಕ್ ಬೆಳ್ಳಿಪ್ಪಾಡಿ ಪಾಲ್ಗೊಂಡಿದ್ದರು. ಯುವ ಕಾಂಗ್ರೆಸ್ ಮುಖಂಡ ಶಿವಪ್ರಸಾದ್ ಪಾಣಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.